Connect with us

    DAKSHINA KANNADA

    ಬಿಜೆಪಿ ಪಕ್ಷದ ವರಿಷ್ಠರು ನಿರ್ಣಯಿಸಿದ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿರುವ ಅರುಣ್ ಪುತ್ತಿಲ ನಾನು ಮೋದಿ,ಬಿಜೆಪಿ ಬೆಂಬಲಿಗ ಅನ್ನೋದು ಹಾಸ್ಯಾಸ್ಪದ- ಡಾ. ಎಂ.ಕೆ.ಪ್ರಸಾದ್

    ಪುತ್ತೂರು, ಎಪ್ರಿಲ್ 27: ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿರುವ ಆಶಾ ತಿಮ್ಮಪ್ಪ ಅವರ ವಿರುದ್ದ ಬಂಡಾಯವಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಅವರು ಈ ತನಕ ಯಾವತ್ತಾದರೂ ಬಿಜೆಪಿಗೆ ಓಟು ಹಾಕಿದ್ದಾರಾ ಎಂಬುದನ್ನು ಸ್ಪಷ್ಟ ಪಡಿಸಲಿ. ಚುನಾವಣೆಯ ಸಂದರ್ಭದಲ್ಲಿ ನಾನು ಬಿಜೆಪಿಗೆ ಓಟು ಹಾಕುವುದಿಲ್ಲ ಎನ್ನುತ್ತಾ ತಿಪ್ಪರಲಾಗ ಹಾಕುತ್ತಿದ್ದರು. ನಾನು ಅವರೊಂದಿಗೆ ಇದ್ದ ಕಾರಣ ನನಗೆ ಅವರ ಎಲ್ಲಾ ನಡೆಯ ಬಗ್ಗೆ ತಿಳಿದಿದೆ. ಅವರು ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ ಎಂದು ಬಿಜೆಪಿ ಪಕ್ಷದ ಹಿರಿಯರಾದ ಡಾ. ಎಂ.ಕೆ. ಪ್ರಸಾದ್ ಭಂಡಾರಿ ತಿಳಿಸಿದ್ದಾರೆ.

    ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದುತ್ವದ ಕೆಲಸ ಮಾಡಲು ಯಾರೂ ಶಾಸಕರಾಗಬೇಕಾಗಿಲ್ಲ. ಸಾವರ್ಕರ್ ರಿಂದ ಕಲ್ಲಡ್ಕ ಪ್ರಭಾಕರ ಭಟ್ ತನಕ ನಿರಂತರವಾಗಿ ಹಿಂದುತ್ವಕ್ಕಾಗಿ ಹೋರಾಟ ನಡಸಿದ ಯಾರೂ ನಮಗೆ ಶಾಸಕತ್ವ ಕೊಡಿ ಎಂದು ಕೇಳಿಲ್ಲ. ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ನೀಡಿದ್ದ ಹುದ್ದೆಯನ್ನು ತಿರಸ್ಕರಿಸುತ್ತಾ ಮುಖ್ಯ ವಾಹಿನಿಗೆ ಬಾರದೆ ತನ್ನದೇ ಸಹಚರರ ಕೂಟವನ್ನು ಕಟ್ಟಿಕೊಂಡು ಓಟು ಬಂದಾಗ ಪಕ್ಷಕ್ಕೆ ವಿರೋಧ ಮಾಡುತ್ತಿದ್ದರು. ಶಕುಂತಳಾ ಶೆಟ್ಟಿ ಅವರ ಅವಧಿಯನ್ನು ಹೊರತುಪಡಿಸಿ ಬೇರೆ ಯಾವುದೇ ಪಕ್ಷದ ಅಭ್ಯರ್ಥಿಗಳಿಗೆ ಅವರು ಬೆಂಬಲ ನೀಡಿಲ್ಲ. ಬಿಜೆಪಿ ಕಚೇರಿಗೆ ಬಾರದೆ ಮುಖಂಡರನ್ನು ಸಂಪರ್ಕಿಸದೆ ತನಗೆ ಟಿಕೇಟ್ ನೀಡಬೇಕೆಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

    ಇದೀಗ ಹಿಂದುತ್ವದ ಹೆಸರು ಹೇಳುತ್ತಿರುವ ಹಿಂದೂ ನಾಯಕ ಎನ್ನುವ ಅವರು ಹಿಂದೂಗಳಿಗೆ ತೊಂದರೆ ನೀಡಿದ್ದಾರೆ. ಮುಂಡೂರು ಮೃತ್ಯುಂಜೇಶ್ವರ ದೇವಾಲಯದ ವಿಚಾರದಲ್ಲಿ ಅವರ ಮೇಲೆ ಹಲವು ಕೇಸುಗಳಾಗಿವೆ. ಹಿಂದೂಗಳಿಗೆ ದೇವಾಲಯದ ಒಳಗಡೆ ಹೊಡೆದಿದ್ದಾರೆ. ಸುರೇಶ್ ಕಣ್ಣಾರಾಯ ಎಂಬವರ ಮೇಲೆ ದೇವಳದ ಒಳಗೆ ಹಲ್ಲೆ ನಡೆಸಿದ್ದಾರೆ. ಢಅವರು ಮುಂಡೂರು, ಉಕ್ಕಿನಡ್ಕ ಇನ್ನಿತರ ದೇವಳಗಳಲ್ಲಿ ಬ್ರಹ್ಮಕಲಶೋತ್ಸವ ಇನ್ನಿತರ ಕೆಲಸ ನಡೆಸಿದ ಲೆಕ್ಕ ಪತ್ರಗಳನ್ನು ನೀಡಿಲ್ಲ ಎಂಬ ಆಪಾದನೆಗಳಿವೆ. ಮುಂಡೂರು ದೇವಾಲಯದ ಆಡಳಿತ ಮೊಕ್ತೇಸರ ಲೋಕಪ್ಪ ಗೌಡ ಅವರಿಗೆ ಸಾಕಷ್ಟು ತೊಂದರೆ ನೀಡಿದ್ದಾರೆ. ಲೋಕಪ್ಪ ಗೌಡ ನೇತೃತ್ವದಲ್ಲಿ ನಿರ್ಮಿಸಲಾಗಿದ್ದ ನಾಗರಕಟ್ಟೆ ನಿರ್ಮಾಣವನ್ನು ವಿರೋಧಿಸಿ ಹೈಕೋರ್ಟ್‍ಗೆ ಹೊಗಿ ತಡೆ ತಂದಿದ್ದಾರೆ. ಉಕ್ಕಿನಡ್ಕ ಮೋನಪ್ಪ ಕರ್ಕೇರ ಅವರ ಕೈಯಿಂದ ದೇವಳದ ಅಧಿಕಾರ ಕಿತ್ತುಕೊಂಡಿದ್ದಾರೆ. ಪುತ್ತೂರಿನಲ್ಲಿ ನಡೆಸಿದ ಶನಿಪೂಜೆಯಲ್ಲಿ ದೊಡ್ಡಸ್ತಿಕೆಯಿಂದ ಮೆರವಣಿಗೆ ನಡೆಸಲು ಹೋಗಿ ಲಾಠಿ ಚಾರ್ಜ್ ನಡೆಯಲು ಕಾರಣರಾಗಿದ್ದಾರೆ. ಈ ಸಂದರ್ಭದಲ್ಲಿ ಸಂಗ್ರಹಿಸಿದ ಹಣದ ಲೆಕ್ಕಾಚಾರವನ್ನೂ ನೀಡದೆ. ಕೊನೆಗೆ ಡಿವಿ ಸದಾನಂದ ಗೌಡರು ನಮಗೆ ಹೊಡೆಸಿದರು ಎಂದು ಹೇಳಿ ತಪ್ಪಿಸಿಕೊಂಡಿದ್ದರು. ಹಿಂದೂಗಳಿಗೆ ಇಂತಹ ತೊಂದರೆ ನೀಡಿದವರನ್ನು ದೇವಸ್ಥಾನದಲ್ಲಿ ತಪ್ಪು ಮಾಡಿದವರನ್ನು ಹಿಂದೂ ನಾಯಕ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು.

    ಅರುಣ್ ಕುಮಾರ್ ಪುತ್ತಿಲ ಓರ್ವ ಉತ್ತಮ ಸಂಘಟಕ, ಕೆಲಸಗಾರ ಆದರೆ ಆತನಿಂದ ಈ ತನಕ ಯಾರಿಗೂ ಸಹಾಯವಾಗಿಲ್ಲ. ಎಲ್ಲಾದ್ರೂ ಗಲಾಟೆ ಆದಾಗ ನಡುವೆ ಬಂದು ನಿಂತು ಫೋಸು ಕೊಡುವುದು ಬಳಿಕ ನಾನು ಪರಿಹರಿಸಿದೆ ಎಂದು ಹೇಳುವುದು ಆತನ ಜಾಯಮಾನ. ನನಗೇ ಅಧಿಕಾರ ಸಿಗಬೇಕು ಎಂಬ ವಕ್ರ ಮನಸ್ಸಿನ ಪುತ್ತಿಲ ಅವರು ನನ್ನ ಪತ್ನಿ ಮಲ್ಲಿಕಾ ಪ್ರಸಾದ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭದಲ್ಲಿಯೂ ನಮಗೆ ಸಾಕಷ್ಟು ಅನ್ಯಾಯ ಮಾಡಿದ್ದಾರೆ. ಆದರೂ ನಾನು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಅವರು ಸರಿಯಾಗಲಿ ಎಂದು ಬಯಸಿ ಒಟ್ಟಿಗೆ ಸೇರಿಸಿಕೊಂಡಿದ್ದೆ. ಆದರೆ ಆತನದ್ದು ವಕ್ರ ಮನಸ್ಸು ನನಗೆ ಅಧಿಕಾರ ಬೇಕು ಎಂಬ ಹಂಬಲ. ತಾನು ಮೋದಿ ಬೆಂಬಲಿಗ, ಬಿಜೆಪಿ ಬೆಂಬಲಿಗ ಎನ್ನುವ ಪುತ್ತಿಲ ಅವರು ಪಕ್ಷದ ವರಿಷ್ಠರಾದ ಮೋದಿ, ನಡ್ಡಾ, ಅಮಿತ್ ಶಾ ಸೂಚಿಸಿದ ಅಭ್ಯರ್ಥಿಯನ್ನು ಬೆಂಬಲಿಸದೆ. ಪಕ್ಷದ ವರಿಷ್ಠರು ದೂರವಾಣಿ ಕರೆ ಮಾಡಿದಾಗ ಅದನ್ನು ಧಿಕ್ಕರಿಸಿ ಪಕ್ಷೇತರವಾಗಿ ಸ್ಪರ್ಧಿಸಿಕೊಂಡು ಇದೀಗ ಪಕ್ಷದ ಮತ್ತು ಮೋದಿ ಅವರ ಹೆಸರು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

    ಈ ಹಿಂದೆ ಬಜರಂಗದಳ ಜಿಲ್ಲಾ ಸಂಚಾಲಕರಾಗಿದ್ದ ಪುತ್ತಿಲ ಅವರ ನಡವಳಿಕೆಯಿಂದಲೇ ಸಂಘ ಪರಿವಾರ ಸಂಘಟನೆಯಿಂದ ಹೊರ ನಡೆದರು. ನಂತರ ಪ್ರಮೋದ್ ಮುತಾಲಿಕ್‍ರೊಂದಿಗೆ ಕೈಜೋಡಿಸಿ ಶ್ರೀರಾಮ ಸೇನೆಯ ಸಂಚಾಲಕರಾದರು. ಶ್ರೀರಾಮ ಸೇನೆಯಲ್ಲಿ ಮರಾಠಿ ಪ್ರಾರ್ಥನೆ ನಡೆಸಿ ಹಾಸ್ಯಾಸ್ಪದ ವ್ಯಕ್ತಿಯಾದರು. ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ ಆದಾಗ ಶ್ರೀರಾಮ ಸೇನೆಯಿಂದ ಹೊರ ಬಂದು ತನ್ನದೇ ಹಿಂದೂ ಸೇನೆ ರಚಿಸಿಕೊಂಡರು. ಬಳಿಕ ಅದನ್ನೂ ಅರ್ಧದಲ್ಲಿ ಕೈ ಬಿಟ್ಟರು. ಮೋದಿ ಪರಿಚಯದ ದೃಷ್ಠಿಯಿಂದ ಸ್ಥಾಪಿಸಲಾದ ನಮೋ ಬ್ರಿಗೇಡ್‍ನಲ್ಲಿ ನಾನೇ ಅವರನ್ನು ಸೇರಿಕೊಂಡು ಅವರು ಸರಿಯಾಗಲಿ ಎಂದು ಬಯಸಿದ್ದೆ. ಆದರೆ ಅವರು ಸರಿಯಾಗಲಿಲ್ಲ. ನಮಗೆ ಉಗ್ರ ಪ್ರವೃತ್ತಿಯ ಶಾಸಕರು ಬೇಡ. ಶಾಂತ ಪ್ರವೃತ್ತಿಯ ಶಾಸಕರು ಬೇಕು. ಆಶಾ ತಿಮ್ಮಪ್ಪ ಅವರು ಶಾಂತ ಪ್ರವೃತ್ತಿಯವರು ಅವರು ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಪುತ್ತಿಲ ಅವರಿಗೆ ಕಾಂಗ್ರೆಸ್ ಹಿಂಬಾಗದಿಂದ ಸಹಾಯ ಮಾಡುತ್ತಿದೆ. ಆದರೆ ಅವರು ಗೆಲ್ಲುವುದಿಲ್ಲ. ಅವರಿಗೆ ಗೆಲುವಿನ ಕನಸು ಬೇಡ ಎಂದರು.

    ಸಂಜೀವ ಮಠಂದೂರು ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ನಡೆಸಿದ್ದರು. ಆದರೆ ಅವರ ವೈಯಕ್ತಿಕ ವಿಚಾರದಲ್ಲಿ ಅವರನ್ನು ಬದಲಾಯಿಸಬೇಕು ಎಂಬ ಅಭಿಪ್ರಾಯ ಹೆಚ್ಚಾಗಿತ್ತು. ಇದರಿಂದ ಪಕ್ಷಕ್ಕೆ ತೊಂದರೆಯಾಗುವ ಭಯವಿತ್ತು. ಒಂದು ವರ್ಷದ ಹಿಂದೆಯೇ ಶಾಸಕರ ತಪ್ಪನ್ನು ಸರಿಪಡಿಸುವಂತೆ ನಾನು ಹೇಳಿದ್ದೆ. 6 ತಿಂಗಳ ಹಿಂದೆಯೂ ಈ ಮಾತನ್ನು ಹೇಳಿದ್ದೆ. ಆಶಾ ತಿಮ್ಮಪ್ಪ ಅವರ ಹೆಸರನ್ನು ಸೂಚಿಸಿರುವುದು ನಾನೇ ಎಂದು ಡಾ. ಪ್ರಸಾದ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.

    ದೇವಸ್ಥಾನಗಳು ಆಣೆ ಪ್ರಮಾಣಕ್ಕೆಂದು ಇರುವುದಲ್ಲ. ನನಗೆ ದೇವಳದ ಬಗ್ಗೆ ಅಪಾರ ಭಕ್ತಿ ಇದೆ. ಕೆಲವು ಪೊಳ್ಳು ಮಾತುಗಳಿಗೆ ಆಣೆ ಪ್ರಮಾಣಕ್ಕೆ ಹೋಗುವುದಿಲ್ಲ. ಯಾರನ್ನೂ ಗೆಲ್ಲಿಸು, ಸೋಲಿಸು ಎಂದು ನಾನು ದೇವರಲ್ಲಿ ಕೇಳುವುದಿಲ್ಲ. ನಮಗೆ ಮಳೆ ಇಲ್ಲದೆ ಸಮಸ್ಯೆಯಾಗಿದೆ. ಮನೆ ಸುರಿಸು ಎಂದು ದೇವರಲ್ಲಿ ಬೇಡುತ್ತೇನೆ ಎಂದು ಪುತ್ತಿಲ ಅವರ ಪ್ರಮಾಣದ ಸವಾಲಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಡಾ. ಎಂ.ಕೆ. ಪ್ರಸಾದ್ ಭಂಡಾರಿ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ ರಾವ್ ಬಪ್ಪಳಿಗೆ, ರಾಜೇಶ್ ಬನ್ನೂರು, ಶಂಭು ಭಟ್ ಮತ್ತು ಸಹಜ್ ರೈ ಬಳೆಜ್ಜ ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply