FILM
ಭೂತಾರಾಧನೆ ಸಮಯದಲ್ಲಿ ದೇವರು ಬರೋದು ಸತ್ಯ ಅಲ್ಲವೇ ಅಲ್ಲ, ದೈವ ನರ್ತಕರಿಗೆ ಸರಕಾರ ಎರಡು ಸಾವಿರ ರೂಪಾಯಿ ನೀಡಬಾರದಿತ್ತು: ಬಿ.ಟಿ.ಲಲಿತಾ ನಾಯಕ್

ಬೆಂಗಳೂರು, ನವೆಂಬರ್ 05: ವಿಚಾರವಾದಿ ಸಾಹಿತಿ ಬಿ.ಟಿ.ಲಲಿತಾ ನಾಯಕ್ ಕಾಂತಾರ ಸಿನಿಮಾವನ್ನು ಮತ್ತೊಂದು ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿರುವ ಅವರು, ರಿಷಬ್ ಶೆಟ್ಟಿ ಅವರನ್ನು ವಿಚಾರವಾದಿ ಎಂದು ಕರೆದಿದ್ದಾರೆ. ದೈವ ನರ್ತಕರಿಗೆ ಸರಕಾರ ಎರಡು ಸಾವಿರ ರೂಪಾಯಿ ನೀಡಬಾರದಿತ್ತು ಎಂದು ಮಾತನಾಡಿದ್ದಾರೆ.
ರಿಷಬ್ ಶೆಟ್ಟಿ ಅವರು ಹಿಂದೂತ್ವವಾದಿ ಎಂದು ಒಂದು ಗುಂಪು ಮಾತನಾಡುತ್ತಿದ್ದರೆ, ಬಿ.ಟಿ ಲಲಿತಾ ನಾಯಕ್, ರಿಷಬ್ ಅವರನ್ನು ವಿಚಾರವಾದಿ ಲಿಸ್ಟ್ ಗೆ ಸೇರಿಸಿದ್ದಾರೆ. ಅಲ್ಲದೇ, ರಿಷಬ್ ಮಾಡಿರುವ ಕಾಂತಾರ ಸಿನಿಮಾದ ಬಗ್ಗೆಯೂ ಮಾತನಾಡಿರುವ ಅವರು, ‘ಭೂತಾರಾಧನೆ ಸಮಯದಲ್ಲಿ ದೇವರು ಬರೋದು ಸತ್ಯ ಅಲ್ಲವೇ ಅಲ್ಲ. ದೈವ ನರ್ತಕರು ಓಹೋ ಅಂತ ಚಿರಾಡುವುದು, ಕುಣಿಯುವುದು, ದೇವರು ಮೈಮೇಲೆ ಬರುವುದರಿಂದ ಅಲ್ಲ. ಅದಕ್ಕೆ ಬೇರೆ ಕಾರಣವಿದೆ’ ಎಂದು ಹೇಳಿದ್ದಾರೆ.

ರಿಷಬ್ ಶೆಟ್ಟಿ ಬಗ್ಗೆ ಅನುಕಂಪವನ್ನೂ ತೋರಿಸಿರುವ ಲಲಿತಾ ನಾಯಕ್, ‘ರಿಷಬ್ ತನ್ನ ವಿಚಾರವನ್ನು ನೇರವಾಗಿ ಹೇಳಿ ಹೊಡಿಸಿಕೊಳ್ಳಲು ತಯಾರಿಲ್ಲ. ಹೀಗಾಗಿ ಈ ಮಾರ್ಗ ಅನುಸರಿಸಿದ್ದಾನೆ. ಆತ ತನ್ನ ವಿಚಾರವನ್ನು ನೇರವಾಗಿ ಹೇಳಿದ್ರೆ ಈ ಮೂರ್ಖ ಜನರು ಆತನನ್ನು ಹಿಡಿದು ಹೊಡೆಯುತ್ತಾರೆ, ಪರದೆಗೆ ಬೆಂಕಿ ಹಚ್ಚುತ್ತಾರೆ. ಕೆಲವು ಜನರ ತಲೆ ಅಷ್ಟರಮಟ್ಟಿಗೆ ಕೆಟ್ಟಿದೆ. ಸತ್ಯವನ್ನು ನೇರವಾಗಿ ಹೇಳಿದರೇ ಆತನನ್ನು ಕೊಂದ ಹಾಕುತ್ತಾರೆ. ಇದು ಆತನಿಗೆ ಬೇಕಿಲ್ಲ. ಆತ ಇನ್ನೂ ಬದುಕು ಬೇಕು ಅಂತ ಬಹಳಷ್ಟು ಬುದ್ದಿವಂತಿಕೆಯಿಂದ ಸಿನಿಮಾ ಮಾಡಿದ್ದಾನೆ’ ಎಂದಿದ್ದಾರೆ.
ಕಾಂತಾರ ಸಿನಿಮಾ ನೋಡಲು ಬಹಳಷ್ಟು ಬುದ್ಧಿವಂತಿಕೆ ಬೇಕು. ಕಾಂತಾರ ಕಾಡಿನ ಜನರ ನೋವಿನ ಕಥೆ. ಅವರಿಗೆ ಜಮೀನ್ದಾರಿ ಪದ್ಧತಿಯ ಮೂಲಕ ಒಕ್ಕಲೆಬ್ಬಿಸಲು ನೋಡಿದರು. ಅವರಿಗೆ ಬಹಳಷ್ಟು ಚಿತ್ರಹಿಂಸೆ ನೀಡಿದರು. ಹೀಗಾಗಿ ಅವರು ತಮ್ಮ ಉಳಿವಿಗಾಗಿ ಪೊಲೀಸರ ಮತ್ತು ಸರ್ಕಾರದ ಮೊರೆ ಹೋದರು. ಅವರಿಂದ ನ್ಯಾಯ ಸಿಗದೆ ಚಿರಾಡಿ ಚಿರಾಡಿ ತಮ್ಮ ನೋವು ಹೊರಹಾಕಿದರು. ಅದನ್ನೇ ದೈವ ಅಂತ ನಂಬಲಾಗುತ್ತಿದೆ ಎಂದಿದ್ದಾರೆ.