LATEST NEWS
‘ಈಗಿರುವ ವಕ್ಫ್ ಕಾಯ್ದೆಯಿಂದ ಉಡುಪಿ ಕೃಷ್ಣಮಠ ನಮ್ಮದು ಅಂತಾ ಹೇಳಿದರೂ ಆಶ್ಚರ್ಯವಿಲ್ಲ’ :ಸಂಸದ ಕೋಟ ಶ್ರೀನಿವಾಸ ಪೂಜಾರಿ ..!!
ಉಡುಪಿ:ಈಗಿರುವ ವಕ್ಫ್ ಕಾಯ್ದೆಯಿಂದ ಉಡುಪಿ ಕೃಷ್ಣಮಠ ನಮ್ಮದು ಅಂತಾ ಹೇಳಿದರೂ ಆಶ್ಚರ್ಯವಿಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ರೈತರ, ಮಠ ಹಾಗೂ ಜನಸಾಮಾನ್ಯರ ಆಸ್ತಿಯನ್ನು ಕಬಳಿಸುತ್ತಿರುವ ವಕ್ಫ್ ಬೋರ್ಡ್ ಅಕ್ರಮವನ್ನು ಖಂಡಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ “ನಮ್ಮ ಭೂಮಿ ನಮ್ಮ ಹಕ್ಕು” ಘೋಷ ವಾಕ್ಯದೊಂದಿಗೆ ಆಯೋಜಿಸಿದ್ದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಸ್ವತಂತ್ರ ಭಾರತದಲ್ಲಿ ಈಗಲೂ ಒಂದು ವರ್ಗವನ್ನು ಓಲೈಸಲು ಕಂಡ ಕಂಡಲ್ಲಿ ಭೂಮಿ ಮಂಜೂರು ಮಾಡಲು ಕಾಂಗ್ರೆಸ್ ಪಕ್ಷ ಹೊರಟಿರುವುದು ಖಂಡನೀಯ. ಈಗಿರುವ ವಕ್ಫ್ ಕಾಯ್ದೆಯಲ್ಲಿ ಉಡುಪಿ ಕೃಷ್ಣಮಠ ನಮ್ಮದು ಅಂತಾ ಹೇಳಿದರೂ ಆಶ್ಚರ್ಯವಿಲ್ಲ. ಮುಂದೊಂದು ದಿನ ಕೃಷ್ಣಮಠ ನಮ್ಮದು ಎಂದು ವಕ್ಫ್ ಮಂಡಳಿ ಆದೇಶ ಹೊರಡಿಸಿದ್ರೆ, ಅದನ್ನು ಪ್ರಶ್ನೆ ಮಾಡುವ ಹಕ್ಕು ಕೂಡ ನಮಗಿಲ್ಲ. ಪ್ರಶ್ನೆ ಮಾಡುವ ಹಕ್ಕು ಇರುವುದು ವಕ್ಫ್ ಮಂಡಳಿಗೆ ಮಾತ್ರ. ಹೀಗಾಗಿ ಈ ಕರಾಳ ಕಾಯ್ದೆಗೆ ತಿದ್ದುಪಡಿ ತರುವ ಅನಿವಾರ್ಯತೆ ಇದೆ ಎಂದರು.
ಕಾಯ್ದೆಗೆ ತಿದ್ದುಪಡಿ ಮಾಡಿದರೆ ಮಾತ್ರ ರೈತರು, ಸ್ವಾಮೀಜಿಗಳು, ಜನಸಾಮಾನ್ಯರು ನೆಮ್ಮದಿಯಿಂದ ಬದುಕಬಹುದು. ಇಲ್ಲದಿದ್ದರೆ ಮಠದ ಸ್ವಾಮೀಜಿಗಳು ಸ್ವಾಮೀಜಿಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣ ಆಗಬಹುದು ಎಂದು ಕಳವಳ ವ್ಯಕ್ತಪಡಿಸಿದರು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೊದಲಾದವರು ಉಪಸ್ಥಿತರಿದ್ದರು.