LATEST NEWS
50 ಒತ್ತೆಯಾಳುಗಳು ಬಿಡುಗಡೆ – ನಾಲ್ಕು ದಿನ ಕದನ ವಿರಾಮ ಘೋಷಿಸಿದ ಇಸ್ರೇಲ್

ಟೆಲ್ ಅವೀವ್ ನವೆಂಬರ್ 22: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ದಕ್ಕೆ ಸಣ್ಣ ವಿರಾಮ ಸಿಕ್ಕಿದ್ದು, ಇಸ್ರೇಲ್ ನ 50 ಮಂದಿ ಒತ್ತೆಯಾಳುಗಳ ಬಿಡುಗಡೆ ಮಾಡಲು ಹಮಾಸ್ ಉಗ್ರರು ಒಪ್ಪಿದ ಬೆನ್ನಲ್ಲೇ ಇಸ್ರೇಲ್ 4 ದಿನಗಳ ಕಾಲ ಯುದ್ದ ವಿರಾಮ ಘೋಷಿಸಿದೆ.
ಮಾತುಕತೆಯ ಮಧ್ಯಸ್ಥಿಕೆ ವಹಿಸಿರುವ ಕತಾರ್ ಮತ್ತು ಅಮೆರಿಕದ ಅಧಿಕಾರಿಗಳು, ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಒಪ್ಪಂದವು ಸನ್ನಿಹಿತವಾಗಿದೆ ಎಂದು ಕೆಲ ದಿನಗಳಿಂದ ಹೇಳುತ್ತಿದ್ದರು. ಈಗ ಅದು ನಿಜವಾಗಿದೆ. ಇಸ್ರೇಲ್ ಲೆಕ್ಕಾಚಾರಗಳ ಪ್ರಕಾರ, ಹಮಾಸ್ 200ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದೆ. ನಾಲ್ಕು ದಿನಗಳಲ್ಲಿ 50 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಸಮಯದಲ್ಲಿ ಯುದ್ಧ ವಿರಾಮ ನೀಡಲಾಗುವುದು ಎಂದು ಪ್ರಧಾನಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.

ಬಿಡುಗಡೆಯಾಗುವ ಪ್ರತಿ ಹೆಚ್ಚುವರಿ 10 ಒತ್ತೆಯಾಳುಗಳಿಗೆ ಯುದ್ಧ ವಿರಾಮವನ್ನು ಇನ್ನೊಂದು ದಿನಕ್ಕೆ ವಿಸ್ತರಿಸಲಾಗುವುದು ಎಂದು ಅದು ಹೇಳಿದೆ. ಒತ್ತೆಯಾಳುಗಳಿಗೆ ಪ್ರತಿಯಾಗಿ ಹಮಾಸ್ ಕೈದಿಗಳ ಬಿಡುಗಡೆ ಬಗ್ಗೆ ಇಸ್ರೇಲ್ ಉಲ್ಲೇಖಿಸಿಲ್ಲ.
150 ಕೈದಿಗಳ ವಿನಿಮಯವೂ ಈ ಒಪ್ಪಂದದಲ್ಲಿ ಇರಬಹುದು ಎಂದು ಮಾತುಕತೆಗೂ ಮುನ್ನ ಅಮೆರಿಕ ಅಧಿಕಾರಿಯೊಬ್ಬರು ಹೇಳಿದ್ದರು. ಆದರೆ, ಒಪ್ಪಂದದ ಭಾಗವಾಗಿ ಇಸ್ರೇಲ್ 150 ಪ್ಯಾಲೆಸ್ಟಿನ್ ಮಹಿಳೆಯರು ಮತ್ತು ಮಕ್ಕಳನ್ನು ಜೈಲಿನಿಂದ ಬಿಡುಗಡೆ ಮಾಡುತ್ತಿದ್ದು, ನಮ್ಮ ವಶದಲ್ಲಿರುವ 50 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹಮಾಸ್ ತಿಳಿಸಿದೆ. ‘ಎಲ್ಲ ಒತ್ತೆಯಾಳುಗಳನ್ನು ಕರೆತರಲು ಇಸ್ರೇಲ್ ಸರ್ಕಾರ ಬದ್ಧವಾಗಿದೆ. ಇಂದು ರಾತ್ರಿ, ಈ ಗುರಿಯನ್ನು ಸಾಧಿಸಲು ಮೊದಲ ಹಂತದ ಪ್ರಸ್ತಾವಿತ ಒಪ್ಪಂದವನ್ನು ಅನುಮೋದಿಸಲಾಗಿದೆ’ಎಂದು ಹೇಳಿಕೆಯು ತಿಳಿಸಿದೆ.