National
ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ ಜುಲೈ 31ಕ್ಕೆ ವಿಸ್ತರಣೆ
ನವದೆಹಲಿ, ಜುಲೈ 4 : ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧವನ್ನು ಮತ್ತೆ ಜುಲೈ 31ರ ವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಜುಲೈ 15ರ ಬಳಿಕ ನಿಗದಿತ ವಿಮಾನಗಳ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು ಎಂದಿದ್ದ ವಿಮಾನ ಸಚಿವಾಲಯ ಈಗ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತನ್ನ ನಿರ್ಧಾರವನ್ನು ಮರು ಪರಿಶೀಲಿಸಿದೆ.
ಮಾರ್ಚ್ 23 ರ ಲಾಕ್ ಡೌನ್ ಬಳಿಕ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು. ಮೇ 5ರ ಬಳಿಕ ದೇಶೀಯ ವಿಮಾನಗಳ ಪ್ರಯಾಣ ಆರಂಭಿಸಿದ್ದರೂ, ವಿದೇಶಿ ವಿಮಾನಗಳ ಪ್ರಯಾಣ ರದ್ದು ಮುಂದುವರಿದಿತ್ತು. ಜೂನ್ 26ರಂದು ವಿಮಾನ ಸಚಿವಾಲಯ ನೀಡಿದ ಸುತ್ತೋಲೆಯಲ್ಲಿ ಜುಲೈ 15ರ ವರೆಗೆ ಮಾತ್ರ ವಿಮಾನ ಸಂಚಾರ ರದ್ದು ಮಾಡಿದ್ದು ವಿದೇಶ ಪ್ರಯಾಣಕ್ಕಾಗಿ ಕಾದು ಕುಳಿತಿರುವ ಅನಿವಾಸಿ ಭಾರತೀಯರಲ್ಲಿ ನಿರೀಕ್ಷೆ ಹುಟ್ಟಿಸಿತ್ತು. ಇದಕ್ಕೆ ಪೂರಕ ಎನ್ನುವಂತೆ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಜುಲೈ ಮಧ್ಯಂತರ ವೇಳೆಗೆ ಅಂತಾರಾಷ್ಟ್ರೀಯ ವಿಮಾನಗಳ ಪುನರ್ ಸಂಚಾರಕ್ಕೆ ಸಂಬಂಧಿಸಿ ಸರಕಾರ ಚಿಂತನೆ ನಡೆಸುತ್ತಿರುವುದಾಗಿ ಹೇಳಿದ್ದರು.
ಇದೇ ವೇಳೆ, ಭಾರತದ ವಿಮಾನ ಯಾನ ಸಚಿವಾಲಯ ಕೆನಡಾ, ಯುಕೆ, ಜರ್ಮನಿ, ಫ್ರಾನ್ಸ್ ಇನ್ನಿತರ ಸೋಂಕು ಕಡಿಮೆಯಾಗಿರುವ ದೇಶಗಳ ಜೊತೆ ನೇರ ವಿಮಾನ ಸಂಚಾರಕ್ಕೆ ಸಂಬಂಧಿಸಿ ಅಲ್ಲಿನ ಸರಕಾರಗಳ ಜೊತೆ ಮಾತುಕತೆ ನಡೆಸುತ್ತಿದೆ. ಇಂಥ ಒಪ್ಪಂದಗಳಾದಲ್ಲಿ ಅಲ್ಲಿನ ವಿಮಾನಗಳು ಭಾರತಕ್ಕೆ ಬರಬಹುದು ಮತ್ತು ಏರ್ ಇಂಡಿಯಾ ವಿಮಾನಗಳು ಆ ದೇಶಗಳಿಗೆ ತೆರಳಬಹುದಾಗಿದೆ. ಒಂದು ವೇಳೆ, ಯಾವುದೇ ರಾಷ್ಟ್ರದ ಜೊತೆ ಈ ಒಪ್ಪಂದ ಆದಲ್ಲಿ ಜುಲೈ ತಿಂಗಳಲ್ಲೇ ವಿಮಾನ ಸಂಚಾರಕ್ಕೆ ಅನುಮತಿ ಸಿಗಲಿದೆ.
ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಸ್ಥಗಿತಗೊಂಡು ಮೂರೂವರೆ ತಿಂಗಳಾಗಿದ್ದು ಲಾಕ್ಡೌನ್ ವೇಳೆ ಭಾರತಕ್ಕೆ ಬಂದು ಸಿಕ್ಕಿಬಿದ್ದ ಸಾವಿರಾರು ಮಂದಿ ಸಂಕಷ್ಟದಲ್ಲಿದ್ದಾರೆ.