LATEST NEWS
ಕರಾವಳಿಯಾದ್ಯಂತ ಮುಂದುವರೆದ ಭಾರಿ ಮಳೆ

ಕರಾವಳಿಯಾದ್ಯಂತ ಮುಂದುವರೆದ ಭಾರಿ ಮಳೆ
ಮಂಗಳೂರು ಜುಲೈ 10: ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಭಾರೀ ಮಳೆ ಸುರಿಯುತ್ತಿದ್ದು ಇಂದು ಕೂಡ ಮಳೆ ಮುಂದುವರೆದಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯಧಿಕ 123 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಕರ್ನಾಟಕ ಕರಾವಳಿಗೆ ಮುಂಗಾರು ಪ್ರವೇಶಿಸಿ 1 ತಿಂಗಳಾದರೂ ಕೂಡ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದೆ ಜನತೆ ಕಂಗೆಟ್ಟಿದ್ದರು, ಅಲ್ಲದೆ ಮುಂಗಾರು ಕೈಕೊಟ್ಟಿದ್ದರಿಂದ ಜೂನ್ ತಿಂಗಳಲ್ಲಿ ಪ್ರಾರಂಭವಾಗಬೇಕಿದ್ದ ಕೃಷಿ ಚಟುವಟಿಕೆಗಳು ಈ ಭಾರಿ ಜುಲೈ ತಿಂಗಳಲ್ಲಿ ಪ್ರಾರಂಭವಾಯಿತು.

ಜೂನ್ ಆರಂಭದಲ್ಲಿ ವಾಯು ಚಂಡ ಮಾರುತ ಕರಾವಳಿ ಜಿಲ್ಲೆ ಉಡುಪಿಗೆ ಮಳೆ ಹೊತ್ತು ತಂದಿತ್ತು. ಜುಲೈ 10ರವರೆಗೂ ಮುಂಗಾರು ಮಳೆ ಸಂಪೂರ್ಣ ದುರ್ಬಲವಾಗಿತ್ತು. ಇದೀಗ ಕಳೆದ 2 ದಿನಗಳಿಂದ ಕರಾವಳಿಯಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದ ತೊರೆ ಮತ್ತು ನದಿಗಳು ತುಂಬಿ ಹರಿಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಾದ ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಇತ್ತ ಉಡುಪಿಯಲ್ಲೂ ಭಾರೀ ಮಳೆ ಮುಂದುವರಿದಿದೆ. ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರು ಆಕಾಶಭವನ ಪ್ರದೇಶದಲ್ಲಿ ಲಘು ಭೂಕುಸಿತ ಸಂಭವಿಸಿದ್ದು, ಒಂದು ಮನೆಗೆ ಹಾನಿಯಾಗಿದೆ. ಪುತ್ತೂರು ನರಿಮೊಗರುವಿನಲ್ಲಿ ಶಾಲಾ ಶೌಚಾಲಯ ಕಟ್ಟಡದ ಮೇಲೆ ಮರವೊಂದು ಬಿದ್ದ ಪರಿಣಾಮ, ಓರ್ವ ವಿದ್ಯಾರ್ಥಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ಅನೇಕ ಮಳೆ ಹಾನಿ ಪ್ರಕರಣ ದಾಖಲಾಗಿದೆ. ಕುಂದಾಪುರದಲ್ಲಿ ಗಾಳಿ ಮಳೆ ಬಿದ್ದಿದ್ದರಿಂದ ಮನೆಗಳ ಮೇಲೆ ಮರ ಬಿದ್ದಿದೆ. ಸುಮಾರು 10 ಮನೆಗಳಿಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕುಂದಾಪುರದಲ್ಲಿ ಒಂದು ಅಂಗಡಿಗೆ ತೆಂಗಿನ ಮರ ಬಿದ್ದು 15 ಸಾವಿರ ರೂಪಾಯಿ ನಷ್ಟವಾಗಿದೆ. ಅಷ್ಟೇ ಅಲ್ಲದೇ ಐದು ದನದ ಕೊಟ್ಟಿಗೆಗೆ ಮರ ಬಿದ್ದಿದ್ದು ಸಾವಿರಾರು ರೂಪಾಯಿ ನಷ್ಟವಾಗಿದೆ.
ಉಡುಪಿ ಜಿಲ್ಲೆಯ ಒಟ್ಟು ಏಳು ತಾಲೂಕಿನಲ್ಲೂ ಧಾರಾಕಾರ ಮಳೆಯಾಗಿದ್ದು, ಸುಮಾರು ಮೂರು ಲಕ್ಷ ರೂಪಾಯಿಯಷ್ಟು ನಷ್ಟವಾಗಿದೆ. ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅಲ್ಲಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಇನ್ನು, ಕರಾವಳಿ ಮಂಗಳೂರಿನಿಂದ ಕಾರವಾರದವರೆಗೆ ಅಲೆಗಳು ಅಪಾಯಕಾರಿಯಾಗಿ ಅಪ್ಪಳಿಸುತ್ತಿವೆ ಎಂದು ಹವಾಮಾನ ಇಲಾಖೆ ಹೇಳಿದೆ. ಕಡಲು ಪ್ರಕ್ಷುಬ್ಧಗೊಳ್ಳಲಿದ್ದು, ನೈರುತ್ಯ ಹಾಗೂ ಅರಬ್ಬಿ ಸಮುದ್ರದ ಕೇಂದ್ರದಲ್ಲಿ 40ರಿಂದ 50 ಕಿ.ಮೀ.ವರೆಗೆ ಬಿರುಗಾಳಿ ಬೀಸಲಿದೆ. ಈ ವಾತಾವರಣವು ಜುಲೈ 13ರವರೆಗೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಈ ಅವಧಿಯಲ್ಲಿ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.