LATEST NEWS
ಯಕ್ಷಗಾನ ಪ್ರದರ್ಶನದ ವೇಳೆ ಮೈಕ್, ಲೈಟ್ ಕಿತ್ತೆಸೆದು ಅವಮಾನ ಮಾಡಿದ ಉರ್ವ ಚರ್ಚ್ ಹಾಲ್ ಸಿಬ್ಬಂದಿ

ಯಕ್ಷಗಾನ ಪ್ರದರ್ಶನದ ವೇಳೆ ಮೈಕ್, ಲೈಟ್ ಕಿತ್ತೆಸೆದು ಅವಮಾನ ಮಾಡಿದ ಉರ್ವ ಚರ್ಚ್ ಹಾಲ್ ಸಿಬ್ಬಂದಿ
ಮಂಗಳೂರು ಜನವರಿ 5: ಉರ್ವ ಲೇಡಿಹಿಲ್ ಚರ್ಚ್ ಹಾಲ್‍ನಲ್ಲಿ ಪ್ರೆಸ್‍ಕ್ಲಬ್ ಡೇ ಸಂಭ್ರಮದಲ್ಲಿ ಪತ್ರಕರ್ತರ ಯಕ್ಷಗಾನ ನಡೆಯುತ್ತಿದ್ದ ವೇಳೆ ಮ್ಯಾನೇಜರ್ ಧ್ವನಿವರ್ಧಕ ಮತ್ತು ರಂಗಸ್ಥಳದ ಲೈಟ್ ಆಫ್ ಮಾಡಿ, ಯಕ್ಷಗಾನಕ್ಕೆ ಅವಮಾನ ಮಾಡಿದ ಪ್ರಸಂಗ ನಡೆದಿದೆ.
ಉರ್ವ ಚರ್ಚ್ ಸಂಭಾಂಗಣದಲ್ಲಿ ಶನಿವಾರ ಪ್ರೆಸ್ ಕ್ಲಬ್ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ ಸಭಾ ಕಾರ್ಯಕ್ರಮ, ಮಧ್ಯಾಹ್ನ ಊಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬ್ರೇಕಿಂಗ್ ನ್ಯೂಸ್ ನಡುವೆಯೂ ಪತ್ರಕರ್ತರೆಲ್ಲ ಬಿಡುವು ಮಾಡಿಕೊಂಡು ಯಕ್ಷ ಗುರು ರಾಮಚಂದ್ರ ರಾವ್ ಎಲ್ಲೂರು ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ ನರಕಾಸುರ ವಧೆ, ಮೈಂದ ದ್ವಿವಿಧ ಯಕ್ಷಗಾನವನ್ನು ಪ್ರದರ್ಶಿಸುತ್ತಿದ್ದರು. 1.45 ಗಂಟೆಯ ಯಕ್ಷಗಾನ ಅವಧಿ. ಆದರೆ ಸಭಾ ಕಾರ್ಯಕ್ರಮಗಳು ವಿಳಂಬವಾದ ಕಾರಣ ಮಧ್ಯಾಹ್ನ 1.30ರ ಬಳಿಕ ಯಕ್ಷಗಾನ ಆರಂಭವಾಗಿತ್ತು. 3 ಗಂಟೆಯಾಗುತ್ತಿದ್ದಂತೆಯೇ ಸಭಾಂಗಣದ ಅವಧಿ ಮುಗಿಯಿತು ಎಂದು ಮ್ಯಾನೇಜರ್ ಕೆವಿನ್ ಎಂಬಾತ ಧ್ವನಿವರ್ಧಕ ಬಂದ್ ಮಾಡಿಸಿದರು. ಸಿಬ್ಬಂದಿ ವೇದಿಕೆಯಿಂದ ಮೈಕ್ ಗಳನ್ನು ಎಳೆದುಕೊಂಡು ಹೋದರು.
ಮಹಿಳಾ ಭಾಗವತರು ಮೈಕ್ ಇಲ್ಲದೆಯೂ ಎದೆಗುಂದದೆ ಭಾಗವತಿಕೆ ಮಾಡಿದರು. ಸ್ವಲ್ಪ ಹೊತ್ತಿನಲ್ಲಿ ಲೈಟ್ ಕೂಡಾ ಆಫ್ ಮಾಡಿದರು. ನೋವಾದರೂ ತೋರಿಸದ ಪತ್ರಕರ್ತರು ಧ್ವನಿವರ್ಧಕ, ಲೈಟ್ ಇಲ್ಲದೆಯೂ 20 ನಿಮಿಷಗಳ ಕಾಲ ಯಕ್ಷಗಾನ ಪ್ರದರ್ಶನ ನೀಡಿ, ಮಂಗಳ ಹಾಡಿದರು.
ಉರ್ವ ಲೇಡಿಹಿಲ್ ಚರ್ಚ್ ಹಾಲ್‍ನ ಸಿಬ್ಬಂದಿ ಯಕ್ಷಗಾನ ನಡೆಯುತ್ತಿದ್ದಾಗಲೇ ಮೈಕ್, ಲೈಟ್ ಕಿತ್ತು ಹಾಕುವ ಮೂಲಕ ಕರಾವಳಿಯ ಗಂಡುಕಲೆಗೆ ಘೋರ ಅವಮಾನ ಮಾಡಿದ್ದಾರೆ.
ಯಕ್ಷಗಾನ ನಡೆಯುವ ಸಂದರ್ಭ ಈ ರೀತಿಯ ವರ್ತನೆಯನ್ನು ನನ್ನ ಇಡೀ ಯಕ್ಷಗಾನ ಬದುಕಿನಲ್ಲಿ ಈ ರೀತಿ ಆಗಿಲ್ಲ. ಚರ್ಚ್ ಮಾಲೀಕರು, ಸಿಬ್ಬಂದಿ ಕ್ಷಮೆ ಯಾಚಿಸಬೇಕು ಎಂದು ಯಕ್ಷಗುರು ರಾಮಚಂದ್ರ ಭಟ್ ಎಲ್ಲೂರು ಆಗ್ರಹಿಸಿದ್ದಾರೆ.
ಪ್ರೆಸ್ ಕ್ಲಬ್‍ಗೆ ಹತ್ತಿರುವಾಗಿರುವುದರಿಂದ ಅಲ್ಲಿಯೇ ಪತ್ರಕರ್ತರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಕ್ಷಗಾನಕ್ಕೆ ಹಾಲ್ ಸಿಬ್ಬಂದಿ ಈ ರೀತಿ ಅವಮಾನ ಮಾಡಿರುವುದು ತಪ್ಪು. ಒಂದು 20 ನಿಮಿಷ ಮೈಕ್, ಲೈಟ್ ಹಾಕಿದ್ದರೆ ಅವರ ಗಂಟೇನು ಹೋಗುತ್ತಿತ್ತು. ಇದು ಖಂಡನೀಯ. ಇನ್ನು ಮುಂದೆ ಇಂಥ ಕಠೋರ ನಿಯಮ ಹೇರುವ, ಯಕ್ಷಗಾನ ಅವಮಾನ ಮಾಡುವ ಕಡೆಯ ಯಕ್ಷಗಾನ ಪ್ರದರ್ಶನ ನೀಡದೇ ಇರುವುದೇ ಒಳಿತು ಎಂದು ಪತ್ರಕರ್ತರ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿದ ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.