LATEST NEWS
ಅಧಿಕಾರ ವಹಿಸಿಕೊಂಡ ತಕ್ಷಣ ಶಾಸಕರಿಗೆ ಸಲಾಂ – ಇನ್ಸಪೆಕ್ಟರ್ ಗೆ ಕೊಟ್ಟರಾ ಫರ್ಮಾನ್
ಅಧಿಕಾರ ವಹಿಸಿಕೊಂಡ ತಕ್ಷಣ ಶಾಸಕರಿಗೆ ಸಲಾಂ – ಇನ್ಸಪೆಕ್ಟರ್ ಗೆ ಕೊಟ್ಟರಾ ಫರ್ಮಾನ್
ಮಂಗಳೂರು, ಡಿಸೆಂಬರ್ 16: ಹೊಸದಾಗಿ ಠಾಣೆಯಲ್ಲಿ ಚಾರ್ಜ್ ತೆಗೆದುಕೊಂಡ ಅಧಿಕಾರಿ ಮೊದಲು ಮಾಡಬೇಕಿರುವುದು ತನ್ನ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯ ಕುರಿತು ಮಾಹಿತಿ ಸಂಗ್ರಹಿಸುವುದು ಹಾಗೂ ಈ ಬಗ್ಗೆ ತನ್ನ ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿರುತ್ತದೆ. ಆದರೆ ಇಲ್ಲೊಬ್ಬ ಅಧಿಕಾರಿ ತಾನು ಠಾಣೆಗೆ ವರ್ಗಾವಣೆಗೊಂಡು ಬಂದ ತಕ್ಷಣ ಹೋಗಿ ಸ್ಥಳೀಯ ಶಾಸಕನಿಗೆ ಸಲಾಂ ಹೊಡೆದಿದ್ದಾರೆ.
ಹೌದು ಮಂಗಳೂರು ಪೋಲೀಸ್ ಕಮಿಷನರೇಟ್ ವ್ಯಾಪ್ತಿಗೆ ಬರುವ ಸುರತ್ಕಲ್ ಠಾಣೆಗೆ ಹೊಸದಾಗಿ ವರ್ಗಾವಣೆಗೊಂಡು ಬಂದಿರುವ ಇನ್ಸ್ ಸ್ಪೆಕ್ಟರ್ ಶ್ರೀಧರ್ ಶಾಸ್ತ್ರಿ ಈ ರೀತಿಯ ಹೊಸ ಸಂಪ್ರದಾಯ ಆರಂಭಿಸುವ ಮೂಲಕ ಸುದ್ಧಿಯಲ್ಲಿದ್ದಾರೆ. ಅಂದಹಾಗೆ ಸರಕಾರಿ ಅಧಿಕಾರಿಯೊಬ್ಬ ಒಂದು ಠಾಣೆಯಿಂದ ಇನ್ನೊಂದು ಠಾಣೆಗೆ ವರ್ಗಾವಣೆಗೊಳ್ಳೋದು ಸಹಜ ಪ್ರಕ್ರಿಯೆಯೂ ಆಗಿದೆ. ಈ ಕಾರಣಕ್ಕೆ ವರ್ಗಾವಣೆಗೊಂಡು ಬಂದ ಅಧಿಕಾರಿ ಸ್ಥಳೀಯ ಶಾಸಕರನ್ನು ಸನ್ಮಾನಿಸುತ್ತಿರುವುದು ಇದೇ ಮೊದಲನೆಯದಾಗಿದೆ.
ಕಾನೂನು ಸುವ್ಯವಸ್ಥೆಯ ಜೊತೆಗೆ ನಿಷ್ಪಕ್ಷಪಾತವಾಗಿ ತನ್ನ ಡ್ಯೂಟಿ ನಿರ್ವಹಿಸಬೇಕಾದ ಅಧಿಕಾರಿಯಾದ ಶ್ರೀಧರ್ ಶಾಸ್ತ್ರೀ ಸುರತ್ಕಲ್ ಶಾಸಕರ ಮನೆಗೆ ತೆರಳಿ ಸನ್ಮಾನಿಸುವ ಅಗತ್ಯವಾದರೂ ಏನಿತ್ತು ಎನ್ನುವ ಪ್ರಶ್ನೆ ಇದೀಗ ಕೇಳಿ ಬರುತ್ತಿದೆ. ಅಧಿಕಾರಿಯ ಈ ರೀತಿಯ ವರ್ತನೆ ಹಲವಾರು ಸಂಶಯಗಳಿಗೆ ಹಾಗೂ ಸಂದೇಹಗಳಿಗೆ ಎಡೆ ಮಾಡಿಕೊಡುತ್ತಿದ್ದು, ಸ್ಥಳೀಯ ಶಾಸಕನನ್ನು ಈ ರೀತಿಯಾಗಿ ಸನ್ಮಾನಿಸಿರುವ ಹಿಂದಿನ ರಹಸ್ಯವೇನು ಎನ್ನುವ ಕುತೂಹಲವೂ ಏಳಲಾರಂಭಿಸಿದೆ.
ಸರಕಾರಿ ಅದರಲ್ಲೂ ಪೋಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಈ ರೀತಿ ಜನಪ್ರತಿನಿಧಿಗಳಿಗೆ ಸಲಾಂ ಹೊಡೆಯಲು ನಿಂತರೆ ಆ ಅಧಿಕಾರಿಯಿಂದ ನಿಷ್ಪಕ್ಷಪಾತವಾದ ಸೇವೆಯನ್ನು ನಿರೀಕ್ಷಿಸುವುದಾದರೂ ಹೇಗೆ. ಅದರಲ್ಲೂ ಸುರತ್ಕಲ್ ಇನ್ಸ್ ಸ್ಪೆಕ್ಟರ್ ಗೆ ವರ್ಗಾವಣೆಗೊಂಡು ನೂತನ ಠಾಣೆಯಲ್ಲಿ ಚಾರ್ಜ್ ತೆಗೆದ ತಕ್ಷಣವೇ ಶಾಸಕ ಮೊಯಿದೀನ್ ಭಾವಾ ಅವರನ್ನು ಸಡನ್ನಾಗಿ ಸನ್ಮಾನಿಸುವ ಸಾಧನೆ ಶಾಸಕರು ಮಾಡಿದ್ದಾದರೂ ಏನು ?. ಅಧಿಕಾರಿಗಳು ಜನಪ್ರತಿನಿಧಿಗಳ ಹಾಗೂ ಅಧಿಕಾರಿಶಾಹಿಗಳ ಕೈಗೊಂಬೆಗಳು ಎನ್ನುವ ಆರೋಪಗಳಿಗೆ ಪುಷ್ಠಿ ನೀಡುವಂತಹ ಸಂಗತಿಯು ಇದೀಗ ಈ ಅಧಿಕಾರಿಗಳ ಮೂಲಕ ಬಟಾ ಬಯಲಾಗಿದೆ.
ಜನಪ್ರತಿನಿಧಿಗಳ ಕೈ ಕಾಲಿಗೆ ಬಿದ್ದು ಠಾಣೆಯಿಂದ ಠಾಣೆಗೆ ವರ್ಗಾವಣೆ ಪಡೆದುಕೊಳ್ಳುವ ಇಂತಹ ಅಧಿಕಾರಿಯಿಂದ ಯಾವ ರೀತಿಯ ಸೇವೆಯನ್ನು ನಿರೀಕ್ಷಿಸಬಹುದು ಎನ್ನುವ ಗೊಂದಲದಲ್ಲಿ ಬಡಪಾಯಿ ಜನರಿದ್ದಾರೆ.