Connect with us

    FILM

    ಬೆಂಗಳೂರು ‘ಫಿಲ್ಮ್ ಫೆಸ್ಟಿವಲ್’ನಲ್ಲಿ ರಿಷಬ್ ಶೆಟ್ಟಿ ಚಿತ್ರಕ್ಕೆ ಅನ್ಯಾಯ!

    ಬೆಂಗಳೂರು, ಫೆಬ್ರವರಿ 21: ಈ ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ  ಜೈ ಶಂಕರ್  ನಿರ್ದೇಶನದ, ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಸಿನಿಮಾ ಆಯ್ಕೆಯಾಗದೇ ಇರುವುದಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸೇರಿದಂತೆ ಸಾಕಷ್ಟು ಸಿನಿಮಾ ಪ್ರೇಮಿಗಳು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.

    ಸುದ್ದಿಯೊಂದರಲ್ಲಿಓದಿದ ಪ್ರಕಾರ ಅವರ ಸಿನೆಮಾ 2023 ರಲ್ಲಿ ಸೆನ್ಸಾರ್ ಪ್ರಮಾಣಪತ್ರ ಪಡೆದಿದೆ ಎಂದರೆ, ಚಿತ್ರೋತ್ಸವದ ಮಾನದಂಡದ ಪ್ರಕಾರ ಆಯ್ಕೆಯಾಗಲು ಎಲ್ಲಾ ಅರ್ಹತೆಯನ್ನು ಪಡೆದಿದೆ. ಬುಸಾನ್ ಸೇರಿದಂತೆ ವಿವಿಧ ದೇಶಗಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದಿರುವ ಸಿನಿಮಾ ಆಯ್ಕೆಯಾಗದಿರುವುದಕ್ಕೆ ನೀಡಿರುವ ಕಾರಣ ಸಮಂಜಸವಾಗಿಲ್ಲ. ಅರ್ಹ ಸಿನಿಮಾನ ಆಯ್ಕೆ ಮಾಡದಿರುವುದು ದುರಂತ. ಶಿವಮ್ಮ ಸಿನಿಮಾಗೆ ನ್ಯಾಯ ಸಿಗಲೇಬೇಕು ಎಂದು ಮಂಸೋರೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ದೊಡ್ಡ ಬಜೆಟ್ಟಿನ ಚಿತ್ರಗಳ ಅಬ್ಬರದ ನಡುವೆ ಕನ್ನಡದ ಕೆಲವು ಸಣ್ಣ ಸಿನಿಮಾಗಳು ಭಾರತದ ಗಡಿಯಾಚೆಗೆ ಸಂಚರಿಸಿ ಅಲ್ಲಿನ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸಿ ಕನ್ನಡ ಚಿತ್ರೋದ್ಯಮದ ಕೀರ್ತಿ ಪತಾಕೆಯನ್ನು ಹಾರಿಸಿವೆ. ಅದರಲ್ಲಿ ನಮ್ಮ ರಿಷಬ್ ಶೆಟ್ಟಿ ಸಂಸ್ಥೆಯ ‘ಶಿವಮ್ಮ’ ಚಿತ್ರ ಪ್ರಪಂಚಾದ್ಯಂತ ತನ್ನ ತೆಕ್ಕೆಗೆ ಪ್ರಶಸ್ತಿ, ಪ್ರಶಂಸೆಯನ್ನು ಗಳಿಸಿ ತನ್ನ ವರ್ಲ್ಡ್ ಟೂರಿನ ಮ್ಯಾರಥಾನ್ ಅನ್ನು ಮುಂದುವರಿಸಿದೆ.  ಕೊಪ್ಪಳ ಜಿಲ್ಲೆಯ ಯಾರೇಹಂಚಿನಾಳ ಗ್ರಾಮದಿಂದ ಶುರುವಾದ ಪ್ರಯಾಣ ಹತ್ತಾರು ದೇಶಗಳಲ್ಲಿ ಹಲವಾರು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿದ್ದಲ್ಲದೆ ವಿದೇಶಿಗರ ಪ್ರೀತಿಗೂ ಪಾತ್ರವಾದ ಈ ಸಿನಿಮಾ  ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಸಂಸ್ಥೆಯ ಹೆಮ್ಮೆಯ ಕೊಡುಗೆ.

    ಈವರೆಗೂ ಶಿವಮ್ಮ ಗೆದ್ದ  ಪ್ರಶಸ್ತಿಗಳ ಪಟ್ಟಿ ದೊಡ್ಡದಿದೆ. ನ್ಯೂ ಕರೆಂಟ್ಸ್ ಪುರಸ್ಕಾರ, ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2022, ಯಂಗ್ ಜೂರಿ ಪುರಸ್ಕಾರ, ಫೆಸ್ಟಿವಲ್ ಡೆಸ್ 3 ಕಾಂಟಿನೆಂಟಸ್, ನಾಂಟೆಸ್ 2022, ಅತ್ಯುತ್ತಮ ನಿರ್ದೇಶಕ, ಫಾಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಗ್ರಾಂಡ್ ಪ್ರಿಕ್ಸ್  ಅಟ್ ಜೆರ್ಕೋಲೊ ಹೈನಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಚೀನಾ ಬ್ಲಾಕ್ ಮೂವಿ, ಸ್ವಿಟ್ಜರ್ಲ್ಯಾಂಡ್ ಫಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ , ಇರಾನ್ ಗೋಥೆಂಬರ್ಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಸ್ಪೀಡನ್ ಫಿಲ್ಮ್ ಫೆಸ್ಟ್ ಮುಂಚಿಯನ್, ಮ್ಯುನಿಚ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜೆರ್ಕಾಲೋ , ರಷ್ಯಾ ಇಮೆಜಿನ್ ಇಂಡಿಯಾ, ಸ್ಪೇನ್ ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ, ಕೆನಡ ಇಂಡಿಯನ್ ಪಿಲ್ಮ್  ಫೆಸ್ಟಿವಲ್, ಮೆಲ್ಬೋರ್ನ್ ಅಂಡ್ರಿ ತರ್ಕೊವ್ಸ್ಕಿ  ಅಂತರ್ರಾಷ್ಟ್ರೀಯ ಚಿತ್ರೋತ್ಸವ  ಮುಂತಾದ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
    ಭಾರತದ ಪ್ರತಿಷ್ಠಿತ ಮಾಮಿ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದಕ್ಷಿಣ ಏಷ್ಯಾದ ಚೊಚ್ಚಲ ಪ್ರದರ್ಶನವನ್ನು ಕಂಡಿದೆ. ಶಿವಮ್ಮ ಚಿತ್ರವನ್ನು ಸಂಪೂರ್ಣವಾಗಿ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಿಸಲಾಗಿದ್ದು, ಊರಿನ ಗ್ರಾಮಸ್ಥರೇ ಮುಖ್ಯ ತಾರಾಗಣದಲ್ಲಿದ್ದಾರೆ. ತನ್ನ ಕುಟುಂಬದ ಉನ್ನತಿಗೋಸ್ಕರ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರದಲ್ಲಿ ತೊಡಗುವ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಹಳ್ಳಿ ಹೆಣ್ಣುಮಗಳ ಕಥೆಯಾಗಿದೆ. ಈ ಸಿನಿಮಾದಲ್ಲಿ ಶರಣಮ್ಮ ಚಟ್ಟಿ, ಚನ್ನೆಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದೆ.
    Share Information
    Advertisement
    Click to comment

    Leave a Reply

    Your email address will not be published. Required fields are marked *