LATEST NEWS
ಭಾರತದ ಕುವರಿ ಸಂಜನಾ ಜಾರ್ಜ್ ಡಬ್ಲ್ಯುಡಬ್ಲ್ಯುಇ ಅಖಾಡದಲ್ಲಿ…!?

ಕೊಚ್ಚಿನ್, ಎಪ್ರಿಲ್ 29: ಭಾರತೀಯ ಮಹಿಳೆಯರು ಯಾವುದರಲ್ಲೂ ಕಮ್ಮಿ ಇಲ್ಲ ಎನ್ನೋದನ್ನ ಹಲವು ಕ್ಷೇತ್ರಗಳಲ್ಲಿ ಸಾಧಿಸಿ ತೋರಿದ್ದಾರೆ. ಅದರಲ್ಲೂ ಪುರುಷ ಪ್ರಧಾನವಾಗಿರುವ ವರ್ಲ್ಡ್ ರೆಸ್ಟಲಿಂಗ್ ಎಂಟರ್ಟೈನ್ಮೆಂಟ್ (ಡಬ್ಲ್ಯುಡಬ್ಲ್ಯುಇ) ನಲ್ಲಿ ಮಹಿಳಾ ಸಂಖ್ಯೆ ಬೆರಳಣಿಕೆ. ಅದರಲ್ಲೂ ಭಾರತೀಯರಂತೂ ಇಲ್ಲವೇ ಇಲ್ಲ. ಇಲ್ಲ ಎಂಬುದನ್ನು ಇದೀಗ ಕೇರಳ ಯುವತಿ ಸುಳ್ಳಾಗಿಸಿದ್ದಾರೆ.
ಡಬ್ಲ್ಯುಡಬ್ಲ್ಯುಇ ಗೆ ಭಾರತದ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಸ್ಟಾರ್ ಸಂಜನ ಜಾರ್ಜ್ ಆಯ್ಕೆಯಾಗಿದ್ದಾರೆ. ವಿಶ್ವದ ಅತಿದೊಡ್ಡ ಹಾಗೂ ಹೆಚ್ಚು ಪ್ರಖ್ಯಾತಿ ಪಡೆದಿರುವ ಕುಸ್ತಿ ಉದ್ಯಮದಲ್ಲಿ ಸಂಜನಾ ಸ್ಥಾನ ಪಡೆದಿರುವುದು ಅವರ ಅಭಿಮಾನಿಗಳಿಗೆ ಭಾರಿ ಖುಷಿ ತಂದಿದೆ.

26 ವರ್ಷದ ಸಂಜನಾ ಕೇರಳದ ಕೊಟ್ಟಾಯಂ ಮೂಲದವರು. ಸದ್ಯ ಅಮೆರಿಕದ ಒರ್ಲ್ಯಾಂಡೋದಲ್ಲಿರುವ ಸಂಜನಾ ಡಬ್ಲ್ಯುಡಬ್ಲ್ಯುಇ ಗೆ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ತನ್ನ ಎಂಎಂಎ ಕೌಶಲದಿಂದಲೇ ಪ್ರಖ್ಯಾತಿ ಹೊಂದಿರುವ ಸಂಜನಾ, ಡಬ್ಲ್ಯುಡಬ್ಲ್ಯುಇ ಅಲ್ಲಿ ಮಿಂಚಲು ತಯಾರಿ ನಡೆಸುತ್ತಿದ್ದಾರೆ.
ಚಿಕ್ಕಂದಿನಿಂದಲೂ ಡಬ್ಲ್ಯುಡಬ್ಲ್ಯುಇ ನ ದೊಡ್ಡ ಅಭಿಮಾನಿಯಾಗಿರುವ ಸಂಜನಾ, ತಾನು ಕುಸ್ತಿ ಅಖಾಡದಲ್ಲಿ ಇಳಿಯಬೇಕೆಂಬುದು ಕನಸಾಗಿತ್ತು. ಇಂದು ತಮ್ಮ ಪರಿಶ್ರಮದಿಂದಲೇ ಕೊನೆಗೂ ತಮ್ಮ ಗುರಿ ಸಾಧಿಸಿದ್ದಾರೆ. ಈ ವಿಚಾರವನ್ನು ಸ್ವತಃ ಸಂಜನಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಸಂಜನ ಜಾರ್ಜ್ ರನ್ನು ಡಬ್ಲ್ಯುಡಬ್ಲ್ಯುಇ ರಿಂಗ್ ನಲ್ಲಿ ನೋಡಲು ಅಭಿಮಾನಿಗಳು ಕಾಯುತಿದ್ದಾರೆ.