ಪಾಕಿಸ್ತಾನದ ಎಫ್ -16 ಯುದ್ದ ವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಸೇನೆ

ಶ್ರೀನಗರ ಫೆಬ್ರವರಿ 27: ಭಾರತದ ಎರ್ ಸ್ಟ್ರೈಕ್ ಗೆ ಪ್ರತಿದಾಳಿ ನಡೆಸಲು ನುಗ್ಗಿದ್ದ ಪಾಕಿಸ್ತಾನದ ಎಫ್-16 ಯುದ್ದ ವಿಮಾನವನ್ನು ಭಾರತೀಯ ವಾಯು ಸೇನೆ ಹೊಡೆದುರುಳಿಸಿದೆ.

ಭಾರತ ಪಾಕಿಸ್ತಾನದ ಉಗ್ರರ ತಾಣಗಳನ್ನು ಎರ್ ಸ್ಟ್ರೈಕ್ ಮೂಲಕ ನಾಶ ಪಡಿಸಿದ ಹಿನ್ನಲೆಯಲ್ಲಿ ಪ್ರತೀಕಾರಕ್ಕೆ ತೀರಿಸಿಕೊಳ್ಳಲು ಪಾಕಿಸ್ತಾನ ಮುಂದಾಗಿದ್ದು, ನಿನ್ನೆಯಿಂದ ಗಡಿ ನಿಯಂತ್ರಣ ರೇಖೆಯ ಬಳಿ ಗುಂಡಿನ ದಾಳಿ ಮುಂದುವರೆಸಿದೆ.

ಪಾಕಿಸ್ತಾನದ ಯುದ್ಧ ವಿಮಾನಗಳು ಬುಧವಾರ ಭಾರತೀಯ ವಾಯು ವಲಯ ಉಲ್ಲಂಘಿಸಿ ಒಳನುಸುಳಿ ಬಾಂಬ್‌ ದಾಳಿ ನಡೆಸುವ ಪ್ರಯತ್ನ ನಡೆಸಿದ್ದು, ಭಾರತೀಯ ವಾಯುಪಡೆ ತಕ್ಕ ಪ್ರತ್ಯುತ್ತರದ ಮೂಲಕದ ಜೆಟ್‌ಗಳನ್ನು ಹಿಮ್ಮೆಟಿಸಿವೆ.

ಅಲ್ಲದೆ ಒಂದು ಎಫ್‌–16 ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ. ಭಾರತದೊಳಗೆ ನುಗ್ಗಿ ಮತ್ತೆ ವಾಪಾಸ್‌ ಆಗುತ್ತಿದ್ದ ಪಾಕಿಸ್ತಾನ ವಾಯುಪಡೆಯ ಎಫ್‌–16 ಯುದ್ಧ ವಿಮಾನದ ಮೇಲೆ ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ದಾಳಿ ನಡೆಸಿ ಹೊಡೆದುರುಳಿಸಿವೆ. ಪಾಕಿಸ್ತಾನ ವಲಯದ 3 ಕಿ.ಮೀ ವ್ಯಾಪ್ತಿಯಲ್ಲಿ ಎಫ್‌–16 ವಿಮಾನ ಪತನಗೊಂಡಿದ್ದು, ಪ್ಯಾರಾಚೂಟ್‌ ತೆರೆದುಕೊಂಡಿರುವುದನ್ನು ಗಮನಿಸಲಾಗಿದೆ. ಪೈಲಟ್‌ ಸ್ಥಿತಿ ತಿಳಿದು ಬಂದಿಲ್ಲ.

ಭಾರತದ ಗಡಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು ಶ್ರೀನಗರ ಮತ್ತು ಅಮೃತಸರ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ವಿಮಾನಗಳ ಹಾರಾಟವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಪಾಕಿಸ್ತಾನದ ಗಡಿಗೆ ಹತ್ತಿರದಲ್ಲಿರುವ ಧರ್ಮಶಾಲಾ, ಡೆಹ್ರಡೂನ್‍ನಲ್ಲಿ ವಿಮಾನ ಹಾರಾಟವನ್ನು ಬಂದ್ ಮಾಡಲಾಗಿದೆ.

ಪಾಕಿಸ್ತಾನ ಈಗ ಮುಲ್ತಾನ್, ಲಾಹೋರ್, ಇಸ್ಲಾಮಾಬಾದ್, ಫೈಸಲಾಬಾದ್, ಸಿಯಾಲ್‍ಕೋಟ್ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಹಾರಾಟವನ್ನು ಬಂದ್ ಮಾಡಿದೆ.