KARNATAKA
ಶಾಲೆಗಳಲ್ಲಿ ಹೆಚ್ಚುತ್ತಿರುವ ಕಾರ್ಯ ಒತ್ತಡ, ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ..!
ಶಿವಮೊಗ್ಗ : ಬೈಕಿನಲ್ಲಿ ಶಾಲೆಗೆ ತೆರಳುತ್ತಿದ್ದ ಶಿಕ್ಷಕರೊಬ್ಬರು ಹಠಾತ್ತನೆ ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಆನಂದಪುರಲ್ಲಿ ಇಂದು ಶುಕ್ರವಾರ ನಡೆದಿದೆ.
ನರಸೀಪುರ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕ ಮಂಜುನಾಥ್( 57) ಮೃತಪಟ್ಟ ಶಿಕ್ಷಕರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಜಂಬೆಕೊಪ್ಪ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸಲು ಬೈಕ್ ನಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಮಂಜುನಾಥ್ ಅವರು ಹೆಂಡತಿ, ಓರ್ವ ಪುತ್ರ, ಪುತ್ರಿ, ಹಾಗೂ ಅಪಾರ ಶಿಕ್ಷಕ ವರ್ಗದವರನ್ನು ಅಗಲಿದ್ದಾರೆ. ಶಿಕ್ಷಕ ಮಂಜುನಾಥ್ ಮನೆಗೆ ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನುಡಿದಿದ್ದಾರೆ.
ಸರ್ಕಾರಿ ಶಾಲೆಯಲ್ಲಿನ ಶಾಲಾ ಶಿಕ್ಷಕರಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಶಿಕ್ಷಕರು ಶಾಲೆಗೆ ತೆರಳುತ್ತಿದ್ದಂತೆ ಮಕ್ಕಳಿಗೆ ರಾಗಿ ಮಾಲ್ಟ್, ನಂತರ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ತಿನ್ನುವ ಮಕ್ಕಳ ಸಂಖ್ಯೆ, ಬಾಳೆಹಣ್ಣು ತಿನ್ನುವ ಮಕ್ಕಳ ಸಂಖ್ಯೆಯ ಮಾಹಿತಿ ಸಂಗ್ರಹಿಸಿ ಶಿಕ್ಷಣ ಇಲಾಖೆಗೆ ಕಳಿಸು ವೇಳೆಗಾಗಲೇ ಅರ್ಧ ದಿನ ಕಳೆದು ಹೋಗಿರುತ್ತದೆ. ಈ ಒತ್ತಡದಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡಲಾಗದೆ ಎಲ್ಲಾ ದೃಷ್ಟಿಯಿಂದ ಮಾನಸಿಕವಾಗಿ ಒತ್ತಡ ಅನುಭವಿಸುತ್ತಿದ್ದಾರೆ. ಇದರಿಂದ ಶಿಕ್ಷಕರು ಮಾನಸಿಕ ಒತ್ತಡಕ್ಕೆ ಒಳಗಾಗಿ ಹೃದಯಾಘಾತ, ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ .