KARNATAKA
ನಿರಂತರ ಮಳೆ: ಕೊಡಗು ಜಿಲ್ಲೆಯಾದ್ಯಂತ ಭಾರಿ ವಾಹನ ಸಂಚಾರ ನಿಷೇಧ

ಮಡಿಕೇರಿ, ಜುಲೈ 09: ಕಳೆದ 8 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ರಸ್ತೆಗಳು ಹಾಳಾಗುತ್ತಿವೆ. ಇನ್ನಷ್ಟು ಮಳೆ ಸುರಿದರೆ ರಸ್ತೆಗಳು ಕುಸಿಯುವ ಭೀತಿ ಎದುರಾಗಿದೆ. ಹೀಗಾಗಿ, ಜಿಲ್ಲೆಯಾದ್ಯಂತ ಭಾರಿ ವಾಹನಗಳ ಸಂಚಾರವನ್ನು ಅಕ್ಟೋಬರ್ 10ರವರೆಗೂ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಶನಿವಾರ ಆದೇಶ ಹೊರಡಿಸಿದ್ದಾರೆ.
ಮರದ ದಿಮ್ಮಿಗಳು ಹಾಗೂ ಮರಳು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. 16,200 ಕೆ.ಜಿಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ಮಾಡುವ ವಾಹನಗಳು, ಭಾರಿ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಮಲ್ಟಿ ಆಕ್ಸಲ್ ವಾಹನಗಳ ಸಂಚಾರವನ್ನೂ ನಿಷೇಧಿಸಲಾಗಿದೆ.

ಅಡುಗೆ ಅನಿಲ, ಇಂಧನ, ಹಾಲು, ಸರ್ಕಾರಿ ಕೆಲಸಕ್ಕಾಗಿ ಬಳಸುವ ವಾಹನಗಳು, ಶಾಲಾ, ಕಾಲೇಜು, ಸಾರ್ವಜನಿಕ ಪ್ರಯಾಣಿಕ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕುಶಾಲನಗರ ಹಾಗೂ ಸಂಪಾಜೆಯಲ್ಲಿ ಚೆಕ್‌ಪೋಸ್ಟ್ ರಚಿಸಿ ದಿನದ 24 ಗಂಟೆಗಳ ಕಾಲ ಸಂಚರಿಸುವ ವಾಹನಗಳ ಮೇಲೆ ನಿಗಾ ಇಡಲು ನಿರ್ಧರಿಸಲಾಗಿದೆ. ಜತೆಗೆ, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.