LATEST NEWS
ಪತಂಜಲಿ ಪ್ರಕರಣದ ಜೊತೆಗೆ ಐಎಂಎ ವಿರುದ್ದ ಗರಂ ಆದ ಸುಪ್ರೀಂಕೋರ್ಟ್
ನವದೆಹಲಿ ಎಪ್ರಿಲ್ 24: ಹಾದಿ ತಪ್ಪಿಸುವ ಜಾಹಿರಾತು ನೀಡಿ ಸುಪ್ರೀಂಕೋರ್ಟ್ ನಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಪತಂಜಲಿ ಸಂಸ್ಥೆಯ ಜೊತೆಗೆ ಇದೀಗ ಸುಪ್ರೀಂಕೋರ್ಟ್ ಭಾರತೀಯ ವೈದ್ಯಕೀಯ ಸಂಘದ ವಿರುದ್ದ ಗರಂ ಆಗಿದ್ದು, ನಿಮ್ಮ ಮನೆಯನ್ನು ಮೊದಲು ಸರಿ ಮಾಡಿಕೊಳ್ಳಿ ಎಂದು ಹೇಳಿದೆ.
ಕೋವಿಡ್ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಬಾಬಾ ರಾಮದೇವ್ ಅವರು ಪ್ರವರ್ತಕರಾಗಿರುವ ಪತಂಜಲಿ ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಹೂಡಿದ್ದ ಮೊಕದ್ದಮೆಯ ವಿಚಾರಣೆ ವೇಳೆಯೇ ಸುಪ್ರೀಂ ಕೋರ್ಟ್ ಐಎಂಎಗೆ ಬುದ್ಧಿವಾದ ಹೇಳಿದೆ. ಆಧುನಿಕ ವೈದ್ಯಕೀಯ ಪದ್ಧತಿ ಅನುಸರಿಸುವ ಆಸ್ಪತ್ರೆಗಳಲ್ಲಿ ಅನಗತ್ಯ ಮತ್ತು ದುಬಾರಿ ಔಷಧ ಶಿಫಾರಸು ಮಾಡುವ ಅನೈತಿಕ ಅಭ್ಯಾಸಗಳಿಗೆ ಕಡಿವಾಣ ಹಾಕುವ ಮೂಲಕ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ತನ್ನ ಮನೆಯನ್ನು ಒಪ್ಪವಾಗಿ ಇರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಐಎಂಗೆ ಕಿವಿ ಹಿಂಡಿದೆ ಅನಗತ್ಯ ಮತ್ತು ದುಬಾರಿ ಔಷಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಇದೇ ವೇಳೆ ತನ್ನ ವಿಚಾರಣೆಯ ವ್ಯಾಪ್ತಿಯನ್ನು ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್‌ಎಂಸಿಜಿ) ಸಂಸ್ಥೆಗಳಿಗೂ ಅನ್ವಯಿಸುವುದಾಗಿ ತಿಳಿಸಿದೆ.
ಹಾದಿ ತಪ್ಪಿಸುವ ಜಾಹೀರಾತುಗಳು ಶಿಶುಗಳು, ಮಕ್ಕಳು ಹಾಗೂ ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು ಈ ಸಂಬಂಧ ಗ್ರಾಹಕ ವ್ಯವಹಾರಗಳ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳುವ ಅಗತ್ಯವಿದೆ ಎಂದು ನುಡಿದಿದೆ.