DAKSHINA KANNADA
ಅಕ್ರಮ ಗೋಸಾಗಾಟ ತಡೆಗೆ ಜಿಲ್ಲಾ ಪೋಲೀಸ್ ಇಲಾಖೆಯಿಂದ 24×7 ಗಸ್ತು

ಮಂಗಳೂರು ಜುಲೈ 30:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ಪ್ರಕರಣಗಳು ಮತ್ತೆ ಸುದ್ದಿಗೆ ಬರಲಾರಂಭಿಸಿದೆ. ಕೊರೊನಾ ಪ್ರಕರಣಗಳು ಒಂದೆಡೆ ನಿರಂತರ ವಾಗಿ ಏರಿಕೆಯಲ್ಲಿದ್ದು, ಮತ್ತೊಂದೆಡೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಅಕ್ರಮ ಗೋಸಾಗಾಟ ಹಾಗೂ ಅದನ್ನು ತಡೆಯುವ ಪ್ರಕರಣಗಳು ಹೆಚ್ಚಾಗಲಾರಂಭಿಸಿದೆ. ಕರಾವಳಿಯಲ್ಲಿ ಗೋಸಾಗಾಟದ ವಿಚಾರದಲ್ಲೇ ಹೆಚ್ಚಿನ ಶಾಂತಿ ಕದಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಪೋಲೀಸ್ ಇಲಾಖೆ ಈ ವಿಚಾರವನ್ನು ಇದೀಗ ಗಂಭೀರವಾಗಿ ಪರಿಗಣಿಸಿದೆ.
ಈ ಹಿನ್ನಲೆ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ಇಲಾಖೆ ಅಕ್ರಮ ಗೋಸಾಗಾಟವನ್ನು ತಡೆಯುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಮುಖ್ಯವಾಗಿ ಕೇರಳ ಭಾಗಕ್ಕೆ ಈ ಅಕ್ರಮ ಗೋವುಗಳ ಸಾಗಾಟ ನಡೆಯುತ್ತಿರುವ ಹಿನ್ನಲೆಯಲ್ಲಿ ಗಡಿಭಾಗದಲ್ಲಿ 14 ಅಂತರ್ ರಾಜ್ಯ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಇತರ ಜಿಲ್ಲೆಗಳಿಂದ ಅಕ್ರಮ ಗೋವುಗಳು ಜಿಲ್ಲೆಗೆ ಪ್ರವೇಶಿಸುತ್ತಿರುವ ಕಾರಣ 4 ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಗಳು ಹಾಗೂ ಜಿಲ್ಲೆಯ ಒಳಗೆ 7 ಚಿಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಈ ಹಿಂದೆ ಅಕ್ರಮ ಗೋಸಾಗಾಟ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅವರ ಮೇಲೆ ನಿಗಾ ಇಡುವ ಕೆಲಸವೂ ನಡೆಯುತ್ತಿದೆ.


ಸಾಂಧರ್ಬಿಕ ಚಿತ್ರ
ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಧಾರ್ಮಿಕರ ಮುಖಂಡರ ಜೊತೆ ಚರ್ಚೆಗಳನ್ನೂ ನಡೆಸಲಾಗಿದ್ದು, ಎಲ್ಲಾ ಮುಖಂಡರೂ ಇಂಥ ಘಟನೆಗಳು ಮತ್ತೆ ನಡೆಯದಂತೆ ನೋಡಿಕೊಳ್ಳುವ ಭರವಸೆಯನ್ನೂ ನೀಡಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ದಿನದ 24 ಗಂಟೆಗಳೂ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಹೆಚ್ಚುವರಿಯಾಗಿ 2 ಗಸ್ತು ವಾಹನವನ್ನು ನಿಯೋಜಿಸಲಾಗಿದ್ದು, ರಾತ್ರಿ ಗಸ್ತನ್ನೂ ಹೆಚ್ಚಿಸಲಾಗಿದ್ದು, ಅಲ್ಲದೆ ರಾತ್ರಿ ಸಂಚರಿಸುವ ಪ್ರತೀ ವಾಹನಗಳನ್ನು ಪರಿಶೀಲಿಸಲು ಆದೇಶಿಸಲಾಗಿದೆ.ಗಸ್ತು ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆಯ ಘಟನೆ ಬೆಳಕಿಗೆ ಬಂದಲ್ಲಿ ಆ ಬಗ್ಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ಹೆಚ್ಚಾದಂತೆ ಇದೇ ವಿಚಾರದ ಕುರಿತಂತೆ ರಾಜಕೀಯ ಮೇಲಾಟಗಳೂ ಹೆಚ್ಚಾಗಲಾರಂಭಿಸುತ್ತದೆ. ಅಕ್ರಮ ಗೋಸಾಗಾಟದ ಕುರಿತಂತೆ ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ನೀಡಿದ ಹೇಳಿಕೆ ಭಾರೀ ವಿವಾದಕ್ಕೂ ಕಾರಣವಾಗಿತ್ತು. ಹಿಂದೂಪರ ಸಂಘಟನೆಗಳು ಹೇಳಿಕೆಯನ್ನು ಖಂಡಿಸಿದರೆ, ಮುಸ್ಲಿಂ ಪರ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದವು. ಸರಕಾರ ಜಿಲ್ಲಾಧಿಕಾರಿಯನ್ನು ವರ್ಗಾವಣೆಗೊಳಿಸಿರುವ ಹಿಂದೆಯೂ ಅವರ ಗೋಸಾಗಾಟ ಸಂಬಂಧಿ ಹೇಳಿಕೆಯೂ ಕೆಲಸ ಮಾಡಿದೆ ಎನ್ನುವ ಮಾತೂ ಕೇಳಿ ಬರಲಾರಂಭಿಸಿದೆ.