Connect with us

    DAKSHINA KANNADA

    ಸದ್ಯಕ್ಕೆ ದೇವಸ್ಥಾನಗಳಲ್ಲಿ ಸೇವೆಗೆ ಅವಕಾಶವಿಲ್ಲ – ಕೋಟ

    ಪುತ್ತೂರು ಜುಲೈ 22:ರಾಜ್ಯದ ಯಾವುದೇ ಧಾರ್ಮಿಕ ಕ್ಷೇತ್ರಗಳಲ್ಲೂ ಸದ್ಯಕ್ಕೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆಗೆ ಅವಕಾಶವಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.


    ಧಾರ್ಮಿಕ ಕ್ಷೇತ್ರಗಳಲ್ಲಿ ದೇವರಿಗೆ ವಿವಿಧ ರೀತಿಯ ಸೇವೆಗಳನ್ನು ನೀಡಬೇಕೆಂಬ ಇಚ್ಛೆ ಎಲ್ಲಾ ಭಕ್ತರಲ್ಲೂ ಇದೆ. ಆದರೆ ಕೊರೊನಾ ರೋಗದ ಹಿನ್ನಲೆಯಲ್ಲಿ ಸರಕಾರ ಅನಿವಾರ್ಯವಾಗಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ. ಸದ್ಯಕ್ಕೆ ಎಲ್ಲಾ ಕ್ಷೇತ್ರಗಳಲ್ಲೂ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಸೇವೆಗಳಿಗೆ ಅವಕಾಶವಿಲ್ಲ. ಕ್ಷೇತ್ರಗಳಲ್ಲಿ ಸೇವಗಳನ್ನು ಆರಂಭಿಸುವ ಕುರಿತು ಆರೋಗ್ಯ ಇಲಾಖೆ ಮತ್ತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ ಬಳಿಕವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.


    ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಕಾಮಗಾರಿಗಳ ವೀಕ್ಷಣೆ, ಹಾಗೂ ಕಾಮಗಾರಿಯಲ್ಲಾಗುತ್ತಿರುವ ವಿಳಂಬದ ಕುರಿತು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ಧಿಗಾರೊಂದಿಗೆ ಮಾತನಾಡಿದರು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಕಾಮಗಾರಿಯಲ್ಲಿ ಕೈಗೊಂಡ ಒಳಚರಂಡಿ ವ್ಯವಸ್ಥೆ, ವಸತಿ ಗೃಹಗಳ ಕಾಮಗಾರಿಗೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿರುವ ಹಿನ್ನಲೆಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಮುಜರಾಯಿ ಇಲಾಖೆಯ ಕಮಿಷನರ್ ಗೆ ಸೂಚಿಸಲಾಗಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಒಂದು ತಿಂಗಳ ಒಳಗೆ ಈ ವರದಿ ಸರಕಾರದ ಕೈ ಸೇರಲಿದ್ದು, ಕಾಮಗಾರಿಯಲ್ಲಿ ಲೋಪ ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.


    ಕರಾವಳಿಯಲ್ಲಿ ನಾಗರಪಂಚಮಿಗೆ ವಿಶೇಷ ಮಹತ್ವವಿದ್ದರೂ, ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಾಗರಪಂಚಮಿ ಆಚರಣೆಗೆ ನಿರ್ಬಂಧ ಹೇರಲಾಗಿದೆ. ಜನ ತಮ್ಮ ತಮ್ಮ ಮನೆಯಲ್ಲಿರುವ ನಾಗನ ಕಲ್ಲುಗಳಿಗೆ ತನು ಎರೆಯುವ ಮೂಲಕ ನಾಗರಪಂಚಮಿಯನ್ನು ಆಚರಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply