LATEST NEWS
ಬೆಳ್ತಂಗಡಿ, ಬಂಟ್ವಾಳದಿಂದ ನಿರಂತರ ಗೋಸಾಗಣೆ ; ಬಕ್ರೀದ್ ಬಲಿಗಾಗಿ ಉಳ್ಳಾಲದಲ್ಲಿ ದಾಸ್ತಾನು !

ಮಂಗಳೂರು, ಜುಲೈ 20 : ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಸಿಕ್ಕಿಬಿದ್ದ ಅಕ್ರಮ ಗೋಸಾಗಾಟದ ಹಿಂದೆ ಬೃಹತ್ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ಬಂಟ್ವಾಳ ಮತ್ತು ಬೆಳ್ತಂಗಡಿ ಭಾಗದಿಂದ ದಿನವೂ ರಾತ್ರಿ ವೇಳೆ ಜಾನುವಾರುಗಳನ್ನು ತರಲಾಗುತ್ತಿದ್ದು ಉಳ್ಳಾಲದಲ್ಲಿ ದಾಸ್ತಾನು ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದಕ್ಕೆ ಪೂರಕವಾಗಿ ಇಂದು ಬೆಳಗ್ಗೆ ಗುರುವಾಯನಕೆರೆಯಲ್ಲಿ ಸಿಕ್ಕಿಬಿದ್ದ ಪಿಕಪ್ ವಾಹನ ಎರಡು ದಿನಗಳ ಹಿಂದೆ ಉಳ್ಳಾಲ ನಗರಸಭೆ ಆವರಣದ ಮಹಾತ್ಮಗಾಂಧಿ ರಂಗಮಂಟಪ ಮುಂದೆ ನಿಂತಿದ್ದನ್ನು ಸ್ಥಳೀಯರು “ಮ್ಯಾಂಗಲೂರ್ ಮಿರರ್” ಗಮನಕ್ಕೆ ತಂದಿದ್ದಾರೆ. ಅಲ್ಲದೆ, ದಿನವೂ ಪಿಕಪ್ ವಾಹನದಲ್ಲಿ ಜಾನುವಾರು ತರಲಾಗುತ್ತಿದ್ದು ಉಳ್ಳಾಲದ ಮುಕ್ಕಚ್ಚೇರಿ ಮತ್ತು ಕೋಡಿಯ ಪಾಳು ಬಿದ್ದಿರುವ ನಿರ್ಜನ ಪ್ರದೇಶದಲ್ಲಿ ದಾಸ್ತಾನು ಮಾಡುತ್ತಿದ್ದಾರೆ. ಇಲ್ಲಿ 50ಕ್ಕೂ ಹೆಚ್ಚು ಗೋವುಗಳನ್ನು ಅಲ್ಲಲ್ಲಿ ಕಟ್ಟಿ ಹಾಕಿದ್ದು ಆಗಸ್ಟ್ 1ರಂದು ನಡೆಯುವ ಬಕ್ರೀದ್ ಹಬ್ಬಕ್ಕಾಗಿ ಶೇಖರಣೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭಿಸಿದೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋಮಾಂಸಕ್ಕೆ ಬೇಡಿಕೆ ಹೆಚ್ಚಿರುವ ಕಾರಣ ಉಳ್ಳಾಲದ ಮುಕ್ಕಚ್ಚೇರಿ ಮತ್ತು ಕೋಡಿಯಲ್ಲಿ ಭೀಪ್ ಸ್ಟಾಲ್ ಹೊಂದಿರುವ ಇಬ್ಬರು ಮಾಂಸ ವ್ಯಾಪಾರಿಗಳು ಗೋವುಗಳನ್ನು ತಂದು ಇಲ್ಲಿ ಕೂಡಿಹಾಕುತ್ತಿದ್ದಾರೆ ಎನ್ನುವ ಮಾಹಿತಿ ಖಚಿತ ಮೂಲಗಳಿಂದ ತಿಳಿದುಬಂದಿದೆ.

ಗುರುವಾಯನಕೆರೆಯಲ್ಲಿ ಇಂದು ಸಿಕ್ಕಿರುವ ಪಿಕ್ ಅಪ್ ವಾಹನ ಕೋಡಿಯ ಇಬ್ರಾಹಿಂ ಎಂಬವರದ್ದಾಗಿದ್ದು ಅವರ ಪುತ್ರರೇ ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಈ ಪಿಕ್ ಅಪ್ ವಾಹನ ಎರಡು ದಿವಸಗಳ ಹಿಂದಷ್ಟೆ ಉಳ್ಳಾಲ ನಗರಸಭೆಯ ಆವರಣದಲ್ಲಿ ನಿಂತಿದ್ದುದು ಇದಕ್ಕೆ ಸಾಕ್ಷಿ ಎನ್ನಲಾಗ್ತಿದೆ. ಪಿಕ್ ಅಪ್ ವಾಹನದಲ್ಲಿ ಜಾನುವಾರುಗಳನ್ನು ತುಂಬಿಸಿ ಅದರ ಮೇಲೆ ಹಸಿ ಮೀನಿನ ಟ್ರೇಗಳನ್ನು ಇರಿಸಿ ತರಲಾಗುತ್ತಿದೆ. ಗುರುವಾಯನಕೆರೆಯಲ್ಲಿ ಸಿಕ್ಕಿಬಿದ್ದ ಪಿಕ್ ಅಪ್ ವಾಹನಕ್ಕೆ ಕಂಕನಾಡಿಯ ಚಿಕನ್ ಸೆಂಟರ್ ಹೆಸರಿನಲ್ಲಿ ಜಿಲ್ಲಾಡಳಿತದಿಂದ ಪಾಸ್ ಪಡೆಯಲಾಗಿತ್ತು. ಈ ಪಾಸ್ ಸಹಿತ ಬೆಂಗಾವಲು ವಾಹನದೊಂದಿಗೆ ಅಕ್ರಮ ಗೋಸಾಗಾಟ ಮಾಡುತ್ತಿದ್ದ ವೇಳೆ ಬಜರಂಗದಳ ಕಾರ್ಯಕರ್ತರು ತಡೆದಿದ್ದರಿಂದ ಈಗ ಬೃಹತ್ ಜಾಲ ಬಯಲಾಗಿದೆ.
ಪ್ರತಿದಿನ ಉಳ್ಳಾಲಕ್ಕೆ ಗೋವುಗಳ ಸಾಗಾಟ ಮಾಡಲಾಗುತ್ತಿದ್ದು , ಈ ಬಗ್ಗೆ ಉಳ್ಳಾಲದ ಪೊಲೀಸರಿಗೆ ತಿಳಿದಿದ್ದರೂ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಬೃಹತ್ ಜಾಲದ ಹಿಂದೆ ಬಂಟ್ವಾಳ, ಬೆಳ್ತಂಗಡಿ ಮತ್ತು ಮಂಗಳೂರು ಭಾಗದಲ್ಲಿ ಕೊಡು ಕೊಳ್ಳುವಿಕೆಯ ‘ತಿಳುವಳಿಕೆ’ ಇದ್ದು ಅದಕ್ಕಾಗೇ ಯಾರೂ ತುಟಿ ಪಿಟಿಕ್ ಎನ್ನುವುದಿಲ್ಲ..!