Connect with us

LATEST NEWS

ಕೊರೊನಾ ಹಿನ್ನಲೆ ಆಟಿ ಕಷಾಯಕ್ಕೆ ಭಾರೀ ಡಿಮಾಂಡ್

ಮಂಗಳೂರು ಜುಲೈ 20: ರಾಜ್ಯದಲ್ಲಿ ಹಲವೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಮಹಾಮಾರಿಯ ನಡುವೆಯೇ ಕರಾವಳಿಯಲ್ಲಿ ಇಂದು ಆಷಾಡ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ. ಕರಾವಳಿಯಾದ್ಯಂತ ಆಟಿ ಅಮಾವಾಸ್ಯೆ ಎಂದು ಕರೆಯಲ್ಪಡುವ ಈ ಆಚರಣೆಯ ಪ್ರಮುಖ ಕೇಂದ್ರಬಿಂದು ಆಟಿ ಕಷಾಯ. ದಕ್ಷಿಣಕನ್ನಡ ಜಿಲ್ಲೆಯಲ್ಲೂ ಕೊರೊನಾ ಪಾಸಿಟೀವ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆಷಾಡದ ಈ ಕಷಾಯಕ್ಕೂ ಇದೀಗ ಮಹತ್ವ ಬಂದಿದೆ.


ರಾಜ್ಯದ ಹಲವೆಡೆಗಳಲ್ಲಿ ಕೊರೊನಾ ಮಹಾಮಾರಿ ಕಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾ ಹಿನ್ನಲೆಯಲ್ಲಿ ಜನರ ಎಲ್ಲಾ ಆಚರಣೆಗಳಿಗೂ ಬಹುತೇಕ ಬ್ರೇಕ್ ಬಿದ್ದಿದೆ. ಕರಾವಳಿ ಭಾಗದ ಜನ ಆಷಾಡ ಅಮಾವಾಸ್ಯೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರಕೃತಿಯ ಆರಾಧನೆಯ ಮೂಲಕವೇ ಧಾರ್ಮಿಕ ನಂಬಿಕೆಗಳನ್ನು ಬೆಳೆಸಿಕೊಂಡು ಬಂದಿರುವ ಕರಾವಳಿಯ ಜನರಿಗೆ ಆಷಾಢ ಮಾಸ ಅತ್ಯಂತ ಕಷ್ಟದಿಂದ ಕೂಡಿದ ಮಾಸ ಎನ್ನುವ ನಂಬಿಕೆಯೂ ಇದೆ.


ಈ ಮಾಸದಲ್ಲಿ ಭಾರೀ ಮಳೆ, ಭಾರೀ ಬಿಸಿಲು ಇರುವ ಕಾರಣ ಈ ಮಾಸದಲ್ಲಿ ರೋಗರುಜಿನಗಳು ಹೆಚ್ಚಾಗುತ್ತದೆ ಎನ್ನುವ ನಿರೀಕ್ಷೆಯೂ ಇದೆ. ಇದೇ ಕಾರಣಕ್ಕಾಗಿ ಆಷಾಡ ಮಾಸದ ಆರಂಭದ ದಿನವನ್ನು ಈ ಭಾಗದ ಜನ ಆಟಿ ಅಮಾವಾಸ್ಯೆ ಎನ್ನುವ ಹೆಸರಿನಲ್ಲಿ ಆಚರಿಸುತ್ತಾರೆ.ಈ ದಿನದಂದು ದಕ್ಷಿಣಕನ್ನಡ ಜಿಲ್ಲೆಯ ಜನ ಶಿವಕ್ಷೇತ್ರವಾದ ಕಾರಿಂಜ ಮತ್ತು ನರಹರಿ ಬೆಟ್ಟದಲ್ಲಿ ತೀರ್ಥಸ್ನಾನವನ್ನು ನೆರವೇರಿಸುವ ಮೂಲಕ ತಮ್ಮ ದಿನಚರಿಯನ್ನು ಆರಂಭಿಸುತ್ತಾರೆ. ಆಟಿ ಅಮಾವಾಸ್ಯೆಯಲ್ಲಿ ಕರಾವಳಿಗರು ಕುಡಿಯುವಂತಹ ಕಷಾಯಕ್ಕೆ ಅತ್ಯಂತ ಮಹತ್ವವಿದೆ.


ತುಳುವಿನಲ್ಲಿ ಪಾಲೆ ಮರ ಹಾಗೂ ಕನ್ನಡದಲ್ಲಿ ಹಾಳೆ ಮರ ಎಂದು ಕರೆಯುವ ಮರದ ತೊಗಟೆಯಿಂದ ಅಮಾವಾಸ್ಯೆ ದಿನ ಕಷಾಯವನ್ನು ತಯಾರಿಸಿ ಕುಡಿಯುವುದು ಇಲ್ಲಿನ ಪ್ರಮುಖ ಆಚರಣಾ ವಿಧಿಯಾಗಿದೆ. ಅಮಾವಾಸ್ಯೆಯ ದಿನ ಈ ಮರದ ತೊಗಟೆಯಲ್ಲಿ ಅತ್ಯಂತ ಹೆಚ್ಚಿನ ಔಷಧೀಯ ಗುಣಗಳು ಸೇರಿಕೊಂಡಿರುತ್ತದೆ ಎನ್ನುವುದು ಕರಾವಳಿ ಜನರ ನಂಬಿಕೆ. ಈ ಕಾರಣಕ್ಕಾಗಿ ಕರಾವಳಿಯ ಬಹುತೇಕ ಎಲ್ಲಾ ಮನೆಗಳಲ್ಲಿ ಈ ಕಷಾಯವನ್ನು ತಯಾರಿಸಿ ಹಿರಿಯರಿಂದ ಹಿಡಿದು ಕಿರಿಯರವರೆಗಿನ ಎಲ್ಲಾ ವಯೋಮಾನದವರಿಗೆ ನೀಡಲಾಗುತ್ತದೆ.


ಅಮಾವಾಸ್ಯೆಯಂದು ಕುಡಿಯುವ ಈ ಕಷಾಯದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆಯೂ ಆಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ಕೆಲವು ದಿನಗಳಲ್ಲಿ ಕೊರೊನಾ ಪಾಸಿಟೀವ ಸಂಖ್ಯೆಯು ಉಲ್ಬಣವಾಗುತ್ತಿರುವ ಸಂದರ್ಭದಲ್ಲಿ ಆಟಿ ಅಮಾವಾಸ್ಯೆಯ ಈ ಕಷಾಯಕ್ಕೆ ಭಾರೀ ಮಹತ್ವವೂ ಬಂದಿದೆ.

ಆಟಿ ಅಮಾವಾಸ್ಯೆಯಂದು ಪ್ರತಿಯೊಬ್ಬರು ಈ ಕಷಾಯವನ್ನು ಕುಡಿಯಬೇಕು ಎನ್ನುವ ಅಲಿಖಿತ ಶಿಷ್ಟಾಚಾರವಿದೆ. ಆದರೆ ಇದನ್ನು ಕೆಲವು ಮಂದಿ ಪಾಲಿಸದೇ ಇದ್ದವರು ಈ ಬಾರಿ ಮಾತ್ರ ತಪ್ಪದೇ ಕಷಾಯ ಕುಡಿಯಲಾರಂಭಿಸಿದ್ದಾರೆ. ಕೊರೊನಾ ಭಯದ ನಡುವೆ ಆಟಿ ಅಮಾವಾಸ್ಯೆಯ ಹಾಳೆ ಮರದ ಕಷಾಯಕ್ಕೆ ಭಾರೀ ಮಹತ್ವವೂ ಬಂದಿದೆ. ಈ ಕಷಾಯದ ಮೂಲಕವಾದರೂ ಕೊರೊನಾ ನಿಯಂತ್ರಣ ಸಾಧ್ಯವೇ ಎನ್ನುವ ಭರವಸೆಯಲ್ಲೂ ಕರಾವಳಿಯ ಜನರಿದ್ದಾರೆ.

Facebook Comments

comments