LATEST NEWS
ಜಾಹೀರಾತು ನೋಡಲು ಇಷ್ಟವಿಲ್ಲದಿದ್ದರೆ ನೋಡುವುದೇ ಬೇಡ: ಅರ್ಜಿದಾರರಿಗೆ 25 ಸಾವಿರ ರೂ. ದಂಡ
ನವದೆಹಲಿ, ಡಿಸೆಂಬರ್ 10: ಯೂಟ್ಯೂಬ್‌ನಲ್ಲಿ ಜಾಹೀರಾತು ನೋಡಲು ಇಷ್ಟವಿಲ್ಲದಿದ್ದರೆ ನೋಡುವುದೇ ಬೇಡ. ಹೀಗೆಂದು ಹೇಳಿದ್ದು ಸುಪ್ರೀಂಕೋರ್ಟ್‌ನ ನ್ಯಾ.ಸಂಜಯ ಕಿಶನ್ ಕೌಲ್ ಮತ್ತು ನ್ಯಾ.ಎ.ಎಸ್.ಓಕಾ ನೇತೃತ್ವದ ನ್ಯಾಯಪೀಠ. ಜತೆಗೆ ಅರ್ಜಿದಾರರಿಗೆ 25 ಸಾವಿರ ರೂ. ದಂಡವನ್ನೂ ವಿಧಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ನಿಟ್ಟಿನಲ್ಲಿ ಆನಂದ್ ಕಿಶೋರ್ ಚೌಧರಿ ಎಂಬವರು ಯೂಟ್ಯೂಬ್‌ನಲ್ಲಿ ಲಭ್ಯವಿರುವ ಅಧ್ಯಯನ ವಿಡಿಯೋಗಳನ್ನು ನೋಡಿ ಸಿದ್ಧತೆ ನಡೆಸಿದ್ದರು. ಆದರೆ, ಅವರು ಪರೀಕ್ಷೆ ಬರೆದರೂ ಅದರಲ್ಲಿ ಉತ್ತೀರ್ಣರಾಗಿರಲಿಲ್ಲ. ಯೂಟ್ಯೂಬ್‌ನಲ್ಲಿ ಇರುವ ಹೆಚ್ಚಿನ ಪ್ರಮಾಣದ ಜಾಹೀರಾತಿನಿಂದಲೇ ತನಗೆ ತೇರ್ಗಡೆಯಾಗಲು ಅಸಾಧ್ಯವಾಯಿತು.
ಹೀಗಾಗಿ, ಗೂಗಲ್ ವತಿಯಿಂದ ನನಗೆ 75 ಲಕ್ಷ ರೂ. ಪರಿಹಾರ ಕೊಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠ “ನಿಮಗೆ ಮನಸ್ಸಿಲ್ಲದಿದ್ದರೆ ಜಾಹೀರಾತು ನೋಡಬೇಡಿ. ಏಕಾಗ್ರತೆ ಸಾಧಿಸಲು ಸಾಧ್ಯವಿಲ್ಲ ಎಂದಾದರೆ ಅದು ಬೇಕೆ? ಇಂಥ ಅರ್ಜಿಗಳು ನ್ಯಾಯಾಂಗದ ಸಮಯ ಹಾಳು ಮಾಡುತ್ತವೆ. ಈ ಅರ್ಜಿಯನ್ನು ತಿರಸ್ಕರಿಸುತ್ತೇವೆ ಮತ್ತು ಅರ್ಜಿದಾರರು 4 ವಾರಗಳ ಒಳಗಾಗಿ 25 ಸಾವಿರ ರೂ. ದಂಡವನ್ನು ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಕ್ಕೆ ಜಮೆ ಮಾಡಬೇಕು’ ಎಂದು ತೀರ್ಪು ನೀಡಿತು.