ಚಿಕ್ಕಮಗಳೂರು, ಎಪ್ರಿಲ್ 26: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ನನ್ನ ಹಾಗೆ ರಾಜಕೀಯ ನಿವೃತ್ತಿ ಘೋಷಿಸಿ ಪಕ್ಷ ಸಂಘಟನೆಯಲ್ಲಿ ತೊಡಗಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರದ್ದು ಅವಕಾಶವಾದ ಹಾಗೂ ಅಧಿಕಾರ ದಾಹದ ರಾಜಕಾರಣ. ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಏಕೆ ಬಂದರು ಗೊತ್ತಾ? ಅಲ್ಲಿ ಫೇಲ್ ಆಗಿ ಅವರು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸಿನಲ್ಲಿ ಅವರಿಗೆ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನ ಇಲ್ಲ ಎಂದು ಹೇಳಲಿ ಕಾಂಗ್ರೆಸ್ಸಿಗೆ ಒದ್ದು ಬರುತ್ತಾರೆ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯ ಅವರದ್ದು ವಿಚಾರ ಸಿದ್ಧಾಂತ ಅಲ್ಲ, ಅಧಿಕಾರದ ಸಿದ್ಧಾಂತ. ನನಗೆ ಅಧಿಕಾರವೇ ಮುಖ್ಯವಾಗಿದ್ದರೆ ಅವರಂತೆಯೇ ಮಾಡುತ್ತಿದ್ದೆ. ನಾನು ನಮ್ಮ ನಾಯಕರು ಹೇಳಿದಂತೆ ರಾಜೀನಾಮೆ ಅಲ್ಲ, ನಿವೃತ್ತಿಯಾಗಿದ್ದೇನೆ. ಈಗ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಸಿದ್ದರಾಮಯ್ಯ ಅವರಿಗೆ ಬಿಜೆಪಿಯ ಶಿಸ್ತಿನ ಬಗ್ಗೆ ಕಲ್ಪನೆಯೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮುಸ್ಲಿಂ ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್ ತಡೆಗೆ ಪ್ರತಿಕ್ರಿಯಿಸಿದ ಅವರು, ಒಕ್ಕಲಿಗರಿಗೆ 2% ಮೀಸಲಾತಿ ಜಾಸ್ತಿ ಮಾಡಿದ್ದು ಬಿಜೆಪಿಯ ನಿಲುವು. ಆ ನಿಲುವಿನ ಬಗ್ಗೆ, ಮುಸ್ಲಿಮರಿಗೆ 4% ಮೀಸಲಾತಿ ರದ್ದು ಮಾಡಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದರೆ ನೀಡಲಾದ ಮೀಸಲಾತಿ ರದ್ದು ಮಾಡಿಲ್ಲ. ಅವರ ಜನಸಂಖ್ಯೆಗೆ ತಕ್ಕಂತೆ 10% ಮೀಸಲಾತಿಯಲ್ಲಿ ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಜನಸಂಖ್ಯೆಗೆ ಸಂಬಂಧಿಸಿದಂತೆ ಲಿಂಗಾಯತ ಹಾಗೂ ಒಕ್ಕಲಿಗರಿಗೆ 2% ಜಾಸ್ತಿ ಮಾಡಿದ್ದೇವೆ. ಈ ಎಲ್ಲಾ ಅಂಶಗಳನ್ನ ಕೋರ್ಟ್‍ನಲ್ಲಿ ಮಂಡಿಸುತ್ತೇವೆ. ಸುಪ್ರೀಂ ಕೋರ್ಟ್‍ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.