LATEST NEWS
ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ನಾನು ಕಾಲಿಡಲ್ಲ ಎಂದು ಜನಾರ್ಧನ ಪೂಜಾರಿ ಹೇಳಿದ್ದು ಯಾಕೆ ?
ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ನಾನು ಕಾಲಿಡಲ್ಲ ಎಂದು ಜನಾರ್ಧನ ಪೂಜಾರಿ ಹೇಳಿದ್ದು ಯಾಕೆ ?
ಮಂಗಳೂರು ಮಾರ್ಚ್ 25: ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರ ಈ ಬಾರಿ ಬಹಳ ಕುತೂಹಲ ಮೂಡಿಸಿದ್ದು, ಮಾಜಿ ಕೇಂದ್ರ ಸಚಿವ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ನವೀಕರಣ ರೂವಾರಿ ಬಿ. ಜನಾರ್ಧನ ಪೂಜಾರಿಯವರ ಶಪಥವೊಂದು ಈಗ ಬಹಳ ಚರ್ಚೆಗೆ ಗ್ರಾಸವಾಗಿದೆ.
ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ ಅವರ ನಾಮಪತ್ರ ಸಲ್ಲಿಕೆಗೂ ಮೊದಲು ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೇಸ್ ನ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿ ‘ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಸೋತರೆ ಚುನಾವಣಾ ಫಲಿತಾಂಶದ ಬಳಿಕ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ನಾನು ಕಾಲಿಡುವುದಿಲ್ಲ’ ಎಂದು ಶಪಥ ಮಾಡಿದ್ದಾರೆ.
ಈ ಚುನಾವಣೆಯಲ್ಲಿ ಮಿಥುನ್ ರೈ ಗೆಲ್ಲುತ್ತಾರೆ. ಕುದ್ರೋಳಿ ಗೋಕರ್ಣನಾಥನೇ ಭಾನುವಾರ ರಾತ್ರಿ ನನ್ನ ಕನಸಿನಲ್ಲಿ ಬಂದು ಈ ವಿಷಯ ತಿಳಿಸಿದ್ದಾನೆ. ಅವರು ಸೋತರೆ ನಾನು ಇನ್ನು ಕುದ್ರೋಳಿ ದೇವಸ್ಥಾನಕ್ಕೆ ಕಾಲಿಡುವುದಿಲ್ಲ’ ಎಂದರು.
‘ದೇವಸ್ಥಾನಕ್ಕೆ ಹೋಗುವಂತೆ ಯಾವಾಗಲೂ ಉಳ್ಳಾಲ ದರ್ಗಾಕ್ಕೆ ಹೋಗುತ್ತಿದ್ದೆ. ಚರ್ಚ್‌ಗಳಿಗೂ ಹೋಗುತ್ತಿದ್ದೆ. ಮಿಥುನ್ ಸೋತರೆ ದರ್ಗಾ ಮತ್ತು ಚರ್ಚ್‌ಗಳಿಗೆ ಹೋಗುವುದನ್ನೂ ನಿಲ್ಲಿಸುತ್ತೇನೆ’ ಅಲ್ಲಿಗೂ ಹೋಗುವುದಿಲ್ಲ’ ಎಂದರು.
ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜನಾರ್ದನ ಪೂಜಾರಿ ಪಾಲ್ಗೊಂಡರು. ವಿವಿಧ ದೇವಾಲಯ, ಮಸೀದಿ, ಚರ್ಚ್‌ಗಳ ಭೇಟಿ ಮುಗಿಸಿ ಸಭೆಗೆ ಬಂದ ಮಿಥುನ್, ವೇದಿಕೆಯಲ್ಲಿದ್ದ ಪೂಜಾರಿ ಮತ್ತು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರ ಕಾಲಿಗೆರಗಿ ನಮಸ್ಕರಿಸಿ, ಆಶೀರ್ವಾದ ಪಡೆದರು. ಮಿಥುನ್ ರೈ ಅವರ ತಂದೆ ಡಾ.ಮಹಾಬಲ ರೈ, ಅಣ್ಣಂದಿರಾದ ಡಾ.ಮಯೂರ್ ರೈ ಮತ್ತು ಡಾ.ಮನೀಶ್ ರೈ ಅವರನ್ನು ವೇದಿಕೆ ಮೇಲೆ ಕರೆದ ಪೂಜಾರಿ, ಮಿಥುನ್ ಅವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡೇ ಮಾತನಾಡಿದರು.