KARNATAKA
ಐಪಿಎಸ್ ಅಧಿಕಾರಿ ರೂಪಾ ವಿರುದ್ದ ಕೋರ್ಟ್ ಮೊರೆ ಹೋದ ರೋಹಿಣಿ ಸಿಂಧೂರಿ
ಬೆಂಗಳೂರು ಫೆಬ್ರವರಿ 22: ಐಪಿಎಸ್ ಅಧಿಕಾರಿ ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವಿನ ಗಲಾಟೆ ಇದೀಗ ಕೋರ್ಟ್ ಮೆಟ್ಟಿಲೇರಿದ್ದು, ತಮ್ಮ ವಿರುದ್ದ ಆಕ್ಷೇಪಾರ್ಹ ಮತ್ತು ಮಾನಹಾನಿ ಹೇಳಿಕೆ ನೀಡದಂತೆ ರೂಪಾ ಅವರಿಗೆ ನಿರ್ದೇಶಿಸಬೇಕು. ರೂಪಾ ಅವರ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧವೂ ಪ್ರತಿಬಂಧಕ ಆದೇಶ ಹೊರಡಿಸಬೇಕು ಎಂದು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿಸಲ್ಲಿಸಿದ್ದಾರೆ.
ರೂಪಾ ಹಾಗೂ ರೋಹಿಣಿ ಸಿಂಧೂರಿ ನಡುವೆ ವಿವಾದ ಸರಕಾರದ ಖಡಕ್ ಸೂಚನೆ ನಡುವೆಯೂ ಮತ್ತೆ ಮುಂದುವರೆದಿದೆ. ರೂಪಾ ಐಪಿಎಸ್ ಮತ್ತೆ ರೋಹಿಣಿ ಸಿಂಧೂರಿ ವಿರುದ್ದ ಮಾತನಾಡಿರುವ ಆಡಿಯೋ ವೈರಲ್ ಆದ ಬೆನ್ನಲ್ಲೆ ಇದೀಗ ರೋಹಿಣಿ ಸಿಂಧೂರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ರೋಹಿಣಿ ಸಿಂಧೂರಿ ಅವರ ಅರ್ಜಿ ವಿಚಾರಣೆ ನಡೆಸಿದ 74ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಗಂಗಣ್ಣವರ ಬುಧವಾರ ವಿಚಾರಣೆ ನಡೆಸಿ, ಮಧ್ಯಂತರ ಆದೇಶವನ್ನು ಗುರುವಾರಕ್ಕೆ (ಫೆ.23) ಕಾಯ್ದಿರಿಸಿದ್ದಾರೆ. ವಿಚಾರಣೆ ವೇಳೆ ರೋಹಿಣಿ ಸಿಂಧೂರಿ ಪರ ವಕೀಲರು ವಾದ ಮಂಡಿಸಿ, ‘ರೋಹಿಣಿ ಅವರ ಖಾಸಗಿ ಫೋಟೊಗಳು ಮತ್ತು ಮೊಬೈಲ್ ನಂಬರ್ ಅನ್ನು ರೂಪಾ ತಮ್ಮ ಫೇಸುಬುಕ್ ಖಾತೆಯಲ್ಲಿ ಬಹಿರಂಗಪಡಿಸುವ ಮೂಲಕ ಕಾನೂನು ಬಾಹಿರ ನಡೆ ಅನುಸರಿಸಿದ್ದಾರೆ. ಇದು ಅವರ ಅಧಿಕಾರ ದುರುಪಯೋಗಕ್ಕೆ ಸಾಕ್ಷಿಯಾಗಿದೆ’ ಎಂದರು. ಇದಕ್ಕೆ ನ್ಯಾಯಾಧೀಶರು, ‘ರೂಪಾ ಅವರ ವಿರುದ್ಧ ನೀವು ಸೂಕ್ತ ಪ್ರಾಧಿಕಾರದಲ್ಲಿ ದೂರು ನೀಡಬಹುದಿತ್ತಲ್ಲವೇ’ ಎಂದು ಪ್ರಶ್ನಿಸಿದರು.
ಇದಕ್ಕೆ ರೋಹಿಣಿ ಪರ ವಕೀಲರು, ‘ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈಗಾಗಲೇ ದೂರು ನೀಡಲಾಗಿದೆ‘ ಎಂದರು. ‘ಈ ಪ್ರಕರಣದಲ್ಲಿ ದೂರು ಸಲ್ಲಿಸಲು ಮುಖ್ಯ ಕಾರ್ಯದರ್ಶಿ ಸೂಕ್ತ ಪ್ರಾಧಿಕಾರವೇ’ ಎಂಬ ನ್ಯಾಯಾಧೀಶರ ಮರುಪ್ರಶ್ನೆಗೆ, ‘ನಾಗರಿಕ ಸೇವಾ ನಿಯಮಗಳ ಅನುಸಾರ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಲಾಗಿದೆ. ಆದರೆ, ರೂಪಾ ಮುಖ್ಯ ಕಾರ್ಯದರ್ಶಿ ಸೂಚನೆಯನ್ನೂ ಪಾಲಿಸುತ್ತಿಲ್ಲ. ಸರ್ಕಾರದ ಸುತ್ತೋಲೆಯನ್ನು ಧಿಕ್ಕರಿಸಿ ತಮ್ಮ ಹೇಳಿಕೆಗಳನ್ನು ಮುಂದುವರಿಸಿದ್ದಾರೆ’ ಎಂದು ವಿವರಿಸಿದರು.