Connect with us

    KARNATAKA

    ಎಸಿಬಿಯಿಂದ ಐಎಎಸ್‌ ಅಧಿಕಾರಿ ಜೆ. ಮಂಜುನಾಥ್‌ ಬಂಧನ

    ಬೆಂಗಳೂರು, ಜುಲೈ 04: ಜಮೀನು ಮಾಲೀಕತ್ವದ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅರ್ಜಿದಾರರ ಪರ ಆದೇಶ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಲಂಚ ಪಡೆದಿರುವ ಆರೋಪ ಎದುರಿಸುತ್ತಿರುವ ಐಎಎಸ್‌ ಅಧಿಕಾರಿ ಜೆ. ಮಂಜುನಾಥ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಸೋಮವಾರ ಬಂಧಿಸಿದೆ.

    ಲಂಚ ಪ್ರಕರಣದಲ್ಲಿ ಎಸಿಬಿ ತನಿಖೆ ಎದುರಿಸುತ್ತಿರುವ ಮಂಜುನಾಥ್‌ ಅವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಯಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ನಿರ್ದೇಶಕರ ಹುದ್ದೆಗೆ ವರ್ಗಾವಣೆಗೊಳಿಸಿ ಶುಕ್ರವಾರ ಆದೇಶ ಹೊರಡಿಸಲಾಗಿತ್ತು. ಎಸಿಬಿ ಡಿವೈಎಸ್‌ಪಿ ಕೆ. ರವಿಶಂಕರ್‌ ನೇತೃತ್ವದ ತಂಡ ಸೋಮವಾರ ಮಧ್ಯಾಹ್ನ 3 ಗಂಟೆಗೆ ಯಶವಂತಪುರದಲ್ಲಿ ಅವರನ್ನು ಬಂಧಿಸಿದೆ.

    ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಅನುಕೂಲಕರ ಆದೇಶ ನೀಡಲು ಬೇಗೂರು ನಿವಾಸಿ ಅಜಂ ಪಾಷಾ ಎಂಬುವವರಿಂದ ₹ 5 ಲಕ್ಷ ಲಂಚ ಪಡೆಯುತ್ತಿದ್ದಾಗ ಜಿಲ್ಲಾಧಿಕಾರಿ ಕಚೇರಿ ವ್ಯವಸ್ಥಾಪಕ ಮಹೇಶ್‌ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್‌ ಕುಮಾರ್‌ ಅಲಿಯಾಸ್‌ ಚಂದ್ರು ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ದಳ ಮೇ 21ರಂದು ಬಂಧಿಸಿತ್ತು.

    ‘ನನ್ನ ಜಮೀನಿಗೆ ಸಂಬಂಧಿಸಿದ ಪ್ರಕರಣದ ಆದೇಶವನ್ನು ಪ್ರಕಟಿಸುವಂತೆ ಮನವಿ ಮಾಡಲು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ್ದೆ. ಅವರ ಸೂಚನೆಯಂತೆ ಮಹೇಶ್‌ ಅವರನ್ನು ಭೇಟಿಮಾಡಿದೆ. ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಅಜಂ ‍ಪಾಷಾ ದೂರಿನಲ್ಲಿ ಉಲ್ಲೇಖಿಸಿದ್ದರು. ಜಿಲ್ಲಾಧಿಕಾರಿ ಹಾಗೂ ಮಹೇಶ್‌ ಜತೆಗಿನ ಸಂಭಾಷಣೆಯ ವಿವರವನ್ನು ಮೊಬೈಲ್‌ನಲ್ಲಿ ರೆಕಾರ್ಡಿಂಗ್‌ ಮಾಡಿಕೊಂಡಿದ್ದ ದೂರುದಾರರು ಆ ವಿವರಗಳನ್ನೂ ದೂರಿನೊಂದಿಗೆ ತನಿಖಾ ಸಂಸ್ಥೆಗೆ ನೀಡಿದ್ದರು.

    ಲಂಚದ ಹಣವನ್ನು ಮಹೇಶ್‌ ಮತ್ತು ಚೇತನ್‌ ಕುಮಾರ್‌ ಪಡೆದಿದ್ದರೂ, ದೂರುದಾರರಿಗೆ ಸಂಬಂಧಿಸಿದ ಕಡತ ನೇರವಾಗಿ ಜಿಲ್ಲಾಧಿಕಾರಿ ಬಳಿ ಇರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಮೂರು ತಿಂಗಳಾದರೂ ಆದೇಶ ಪ್ರಕಟಿಸಿದೇ ಇರುವುದು ಕಂಡುಬಂದಿತ್ತು. ಪ್ರಕರಣದಲ್ಲಿ ಮಂಜುನಾಥ್‌ ಅವರನ್ನು ಮೂರನೇ ಆರೋಪಿ ಎಂದು ಹೆಸರಿಸಲಾಗಿದೆ. ಎಸಿಬಿ ಅಧಿಕಾರಿಗಳು ಜೂನ್‌ 22 ಮತ್ತು 30ರಂದು ಇಡೀ ದಿನ ಐಎಎಸ್‌ ಅಧಿಕಾರಿಯ ವಿಚಾರಣೆ ನಡೆಸಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *