LATEST NEWS
ಇಷ್ಟವಿಲ್ಲದ ಮದುವೆಯಿಂದ ತಪ್ಪಿಸಲು ವಧುವಿನಿಂದ ಹೈಡ್ರಾಮ..!
ವಿಜಯವಾಡ, ಮೇ 07: ಮದುವೆ ಆಗಲು ಇಷ್ಟವಿಲ್ಲದ್ದಕ್ಕೆ ವಧುವೊಬ್ಬಳು ಮದುವೆ ಮಂಟಪದಲ್ಲೇ ಕರೊನಾ ನಾಟಕವಾಡಿ ಕೊನೆಗೂ ತನ್ನ ಕಾರ್ಯ ಸಾಧಿಸಿದ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಕದಿರಿ ಪ್ರದೇಶದಲ್ಲಿ ನಡೆದಿದೆ.
ಕದಿರಿಯ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಿನ್ನೆ ಮದುವೆ ನಡೆಯಬೇಕಿತ್ತು. ಧರ್ಮಾವರಂ ಪಟ್ಟಣದ ಯುವಕ ಮುಡಿಗುಬ್ಬಾ ಮಂಡಲದ ಯುವತಿಯನ್ನು ವರಿಸಬೇಕಿತ್ತು. ಎರಡು ಮನೆಯವರು ಎಲ್ಲ ತಯಾರಿಯನ್ನು ಮಾಡಿಕೊಂಡು ಮದುವೆ ಆಹ್ವಾನ ಪತ್ರಿಕೆಯನ್ನು ಹಂಚಿದ್ದರು. ಅದರಂತೆ ನಿನ್ನೆ ಎಲ್ಲರು ಮದುವೆ ಮಂಟಪಕ್ಕೆ ಆಗಮಿಸಿದ್ದರು.
ಮದುವೆ ಮಂಟಪದಲ್ಲೂ ಈ ಮದುವೆ ನನಗೆ ಇಷ್ಟವಿಲ್ಲ ಎಂದು ವಧು ತನ್ನ ಪಾಲಕರಿಗೆ ಹೇಳಿದ್ದಾಳೆ. ಆದರೆ, ಆ ಬಗ್ಗೆ ಹೆಚ್ಚಿನ ಗಮನವನ್ನು ಅವರು ಕೊಡದೆ, ಮದುವೆ ತಯಾರಿ ಕಡೆ ಗಮನ ಹರಿಸಿದ್ದಾರೆ. ಇತ್ತ ಏನು ಮಾಡಬೇಕೆಂದು ದಿಕ್ಕು ತೋಚದ ವಧು, ಕೊನೆಗೆ ಪ್ರಸ್ತುತ ಸನ್ನಿವೇಶವನ್ನು ಬಂಡವಾಳ ಮಾಡಿಕೊಂಡು ತನಗೆ ಕರೊನಾ ಇದೆ ಎಂದು ಸುಳ್ಳು ಹೇಳಿದ್ದಾಳೆ.
ವಧುವಿನ ಮಾತು ಕೇಳಿ ಮಂಟಪದಲ್ಲಿದ್ದವರ ಮನಸ್ಸು ಒಂದು ಕ್ಷಣ ಬ್ಲಾಕ್ ಕೂಡ ಆಗಿದೆ. ಕೋವಿಡ್ ಎಂದು ಹೇಳಿದರೆ ಖಂಡಿತ ಮದುವೆ ಆಗುವುದಿಲ್ಲ ಎಂಬ ನಂಬಿಕೆಯಿಂದಲೇ ಆಕೆ ಸುಳ್ಳು ಹೇಳಿದ್ದಾಳೆ. ಇದಾದ ಬಳಿಕ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದಾಗ ನಿಜಾಂಶ ಹೊರಬಂದಿದೆ. ಪಾಸಿಟಿವ್ ಆಗಿರುವ ಬಗ್ಗೆ ವರದಿ ಕೇಳಿದಾಗ ಇಲ್ಲವೆಂದು ಹೇಳಿದ್ದಾಳೆ. ಮದುವೆ ಇಷ್ಟವಿಲ್ಲದಿದ್ದಕ್ಕೆ ಕರೊನಾ ನಾಟಕವಾಡಿದ್ದಾಳೆಂದು ಎಲ್ಲರಿಗೂ ಗೊತ್ತಾಗಿದೆ.
ಇದು ವರನ ಪಾಲಕರ ಗಮನಕ್ಕೆ ಬಂದು ಅವರು ವಧುವಿನ ವಿರುದ್ಧ ದೂರು ನೀಡಿದ್ದಾರೆ. ಮದುವೆ ಬೇಡವೆಂದರೆ ಮೊದಲೇ ಹೇಳಬೇಕಿತ್ತು. ಇದೀಗ ಎಲ್ಲ ಸಿದ್ಧತೆ ಮಾಡಿಕೊಂಡ ಬಳಿಕ ಹೀಗೆ ಹೇಳಿದರೆ ಏನು ಅರ್ಥ? ಎಂದು ಪ್ರಶ್ನಿಸಿದ್ದಾರೆ. ಇನ್ನು ಯುವತಿ ಬ್ಯಾಂಕ್ ಖಾತೆಗೆ ಫೋನ್ ಪೇ ಮೂಲಕ 3 ಲಕ್ಷ ರೂ. ಹಣ ಕಳುಹಿಸಿರುವುದಾಗಿ ವರ ಹೇಳಿದ್ದು, ಹಣವನ್ನು ಮರಳಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಕೊನೆಯಲ್ಲಿ ಪ್ರಕರಣದ ಬಗ್ಗೆ ಮಾತನಾಡಿದ ಕದಿರಿ ಎಸ್ಐ, ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಕೊಳ್ಳುವುದು ಸರಿಯಲ್ಲ. ಹಣವನ್ನು ಹಿಂದಿರುಗಿಸಲಾಗಿದ್ದು, ಮದುವೆ ವಿವಾದ ಬಗೆಹರಿದಿದೆ ಎಂದು ತಿಳಿಸಿದ್ದಾರೆ.