KARNATAKA
ನಿಧಿಯ ಆಸೆಗೆ ಜ್ಯೋತಿಷಿ ಮಾತು ಕೇಳಿ ನರಬಲಿ: ಅಮಾಯಕನ ಕೊಲೆ!

ಚಿತ್ರದುರ್ಗ: ಪಶ್ಚಿಮ ದಿಕ್ಕಿಗೆ ಹೋಗಿ ನರ ಬಲಿ ನೀಡಿದರೆ ನಿಧಿ ಸಿಗುತ್ತದೆ ಎಂದು ಜ್ಯೋತಿಷಿ ಹೇಳಿದ ಮಾತು ನಂಬಿ ಅಮಾಯಕನನ್ನು ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಳ್ಳಕೆರೆ ತಾಲೂಕು ಪರಶುರಾಂಪುರ ಠಾಣೆ ವ್ಯಾಪ್ತಿಯ ಜೆ.ಜೆ.ಕಾಲೋನಿ ನಿವಾಸಿ ಜಿ.ಎಚ್.ಪ್ರಭಾಕರ್ (50) ಕೊಲೆಯಾದ ವ್ಯಕ್ತಿ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಕುಂದಾರ್ಪಿ ಮಂಡಲದ ಕದರಾಂಪಲ್ಲಿ ಗ್ರಾಮದ ಆನಂದ ರೆಡ್ಡಿ ಪಾವಗಡದ ಹೊಟೇಲ್ನಲ್ಲಿ ಅಡುಗೆಯವನಾಗಿ ಕೆಲಸ ಮಾಡಿಕೊಂಡಿದ್ದ. ಹಣಕಾಸು ಮುಗ್ಗಟ್ಟು ಎದುರಿಸುತ್ತಿದ್ದ ಕಾರಣ ಆತ ಆಗಾಗ ಪಾವಗಡ ತಾಲೂಕು ಕೋಟೆಗುಡ್ಡ ಗ್ರಾಮದ ಜ್ಯೋತಿಷಿ ರಾಮಕೃಷ್ಣ ಬಳಿ ಹೋಗುತ್ತಿದ್ದ ಆಗ ರಾಮಕೃಷ್ಣ. “ಪಶ್ಚಿಮ ದಿಕ್ಕಿಗೆ ಹೋಗಿ ನರಬಲಿ ಕೊಡು ಆಗ ನಿಧಿ ಸಿಗುತ್ತದೆ ಹಣಕಾಸು ಸಮಸ್ಯೆದೂರವಾಗುತ್ತದೆ’ ಎಂದು ಹೇಳಿದ್ದ.

ಅದರಂತೆ ಫೆ 9ರಂದು ಪಾವಗಡದಿಂದ ಪಶ್ಚಿಮಕ್ಕೆ ಇರುವ ಪರಶುರಾಂಪುರ ಕಡೆಗೆ ಬಂದಿದ್ದ ಆರೋಪಿ ಆನಂದ ರೆಡ್ಡಿಯು ನರಬಲಿ ನೀಡಲು ಅಮಾಯಕನಿಗಾಗಿ ಕಾಯುತ್ತಿದ್ದ. ಸಂಜೆ ಬಸ್ ನಿಲ್ದಾಣದ ಬಳಿ ಚಪ್ಪಲಿ ಹೊಲಿಯುವ ಕಾಯಕ ಮುಗಿಸಿ ಮನೆಗೆ ಹೋಗುತ್ತಿದ್ದ ಪ್ರಭಾಕರ್ ಎಂಬವನಿಗೆ ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ಮೇಲೆ ಕರೆದೊಯ್ದು, ಮಚ್ಚಿನಲ್ಲಿ ಮನಸೋ ಇಚ್ಛೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ. ಘಟನೆ ಸಂಬಂಧ ಆನಂದ ರೆಡ್ಡಿ ಹಾಗೂ ಜೋತಿಷಿ ರಾಮಕೃಷ್ಣ ಇಬ್ಬರನ್ನೂ ಪರಶುರಾಂಪುರ ಠಾಣೆ ಪೊಲೀಸರು ಬಂಧಿಸಿದ್ದು, ಫೆ. 22ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.