LATEST NEWS
ಲಕೋಟೆಯಲ್ಲಿ ಪತ್ತೆಯಾದ ಸಂಸ್ಕರಿಸಿದ ಮಾನವನ ಅಸ್ಥಿಗಳು – ಪೊಲೀಸ್ ತನಿಖೆಯಲ್ಲಿ ಬಯಲಾದ ಸತ್ಯ

ಮಂಗಳೂರು ಮಾರ್ಚ್ 31: ಮನೆಯ ಆವರಣದಲ್ಲಿ ಸಿಕ್ಕ ಲಕೋಟೆಯೊಂದರಲ್ಲಿ ಸಂಸ್ಕರಿಸಿದ ರೀತಿಯಲ್ಲಿರುವ ಮಾನವನ ಅಸ್ಥಿಗಳು ಪತ್ತೆಯಾದ ಘಟನೆ ಚಿತ್ರಾಂಜಲಿ ನಗರದಲ್ಲಿ ಶನಿವಾರ ರಾತ್ರಿ ನಡೆದಿದ್ದು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನಲ್ಲೆ ಸ್ಥಳಕ್ಕೆ ಆಗಮಿಸಿದ ಪೋಲಿಸರು ತನಿಖೆ ನಡೆಸಿದ ವೇಳೆ ಅಸ್ಥಿಗಳ ಅಸಲಿಯತ್ತು ಬಯಲಾಗಿದೆ.
ಕಳೆದ ವಾರ ಚಿತ್ರಾಂಜಲಿ ನಗರದಲ್ಲಿ ನಡೆದ ಸ್ಥಳೀಯ ಸಂಘಟನೆಯೊಂದರ ವಾರ್ಷಿಕೋತ್ಸವದ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದ ಯುವಕನೋರ್ವನ ಬಾಡಿಗೆ ಕಾಸ್ಟ್ಯೂಮ್ ಕಳೆದು ಹೋಗಿತ್ತು. ಈ ಹಿನ್ನಲೆ ಕೆಲ ಯುವಕರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ಮಹಿಳೆಯೊಬ್ಬರ ಮನೆಯ ಆವರಣದಲ್ಲಿ ಈ ಲಕೋಟೆ ಪತ್ತೆಯಾಗಿದೆ. ಪ್ರಯೋಗಾಲಯದ ಮಾದರಿಯ ಅಸ್ಥಿಗಳು ಲಕೋಟೆಯಲ್ಲಿ ಸಂಸ್ಕರಿಸಿದ ರೀತಿಯಲ್ಲಿ ಪತ್ತೆಯಾಗಿದ್ದು ಸುದ್ದಿ ಕಾಡಿಚ್ಚಿನಂತೆ ಹಬ್ಬಿ ಸ್ಥಳದಲ್ಲಿ ಸಾಕಷ್ಟು ಜನರು ಜಮಾಯಿಸಿದ್ದರು. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಉಳ್ಳಾಲ ಪೊಲೀಸರು ಅಸ್ಥಿಗಳು ತುಂಬಿದ್ದ ಲಕೋಟೆಯನ್ನ ವಶಕ್ಕೆ ಪಡೆದಿದ್ದರು.

ಚಿತ್ರಾಂಜಲಿ ನಗರದಲ್ಲಿ ದೊರೆತ ಅಸ್ಥಿಗಳನ್ನ ಸ್ಥಳೀಯ ಮಹಿಳೆಯೇ ತನ್ನ ಮನೆಯ ಆವರಣದ ಬಳಿ ಎಸೆದಿರುವ ವಿಚಾರ ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ. ಮಹಿಳೆಯು ಮಂಗಳೂರಿನ ವೈದ್ಯರೋರ್ವರ ಮನೆಯಲ್ಲಿ ಕೆಲಸಕ್ಕಿದ್ದು ನಿವೃತ್ತಿ ಹೊಂದಿದ್ದ ವೈದ್ಯರು ಮನೆ ಬಿಟ್ಟು ಹೋದಾಗ ಮನೆಯಲ್ಲಿದ್ದ ಕೆಲ ಸಾಮಾಗ್ರಿಗಳನ್ನ ಮಹಿಳೆ ತಂದಿದ್ದರೆನ್ನಲಾಗಿದೆ. ವೈದ್ಯರ ಮನೆಯಿಂದ ತಂದಿದ್ದ ಸಂಸ್ಕರಿಸಿಡಲಾದ ಅಸ್ಥಿಗಳ ಲಕೋಟೆಯನ್ನ ಮಹಿಳೆಯು ತನ್ನ ಮನೆಯ ಕಂಪೌಡ್ ಬಳಿ ಎಸೆದಿದ್ದರೆನ್ನಲಾಗಿದೆ.