LATEST NEWS
ಎರಡು ಜಗ್ ಬಿಸಿ ನೀರು, ಒಂದು ಸಣ್ಣ ಬಾಟಲ್ ಸ್ಯಾನಿಟೈಸರ್… ಆಸ್ಪತ್ರೆ ಬಿಲ್ 21 ಸಾವಿರ
ಮಂಗಳೂರು ಜುಲೈ 28: ಕೊರೊನಾ ಹೆಸರಿನಲ್ಲಿ ಆಸ್ಪತ್ರೆಗಳು ಜನರನ್ನು ಲೂಟಿ ಮಾಡುತ್ತಿದೆ ಎನ್ನುವ ಆರೋಪ ಎಲ್ಲೆಡೆ ಕೇಳಿ ಬರಲಾರಂಭಿಸಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲೂ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಈ ಲೂಟಿ ಎಗ್ಗಿಲ್ಲದೆ ಸಾಗುತ್ತಿದೆ. ಕೊರೊನಾ ಪಾಸಿಟೀವ್ ಆದ ವ್ಯಕ್ತಿಯೋರ್ವರನ್ನು ನೋಡಿಕೊಳ್ಳಲು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಗೆ ಬರೋಬ್ಬರಿ 21 ಸಾವಿರ ರೂಪಾಯಿಗಳ ಬಿಲ್ ಮಾಡಲಾಗಿದೆ.
ಈ ವ್ಯಕ್ತಿಯ ಸಂಬಂಧಿಕರೋರ್ವರು ಹೃದಯದ ಸಮಸ್ಯೆಯಿಂದಾಗಿ ಇದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರಲ್ಲಿ ಕೊರೊನಾ ಪಾಸಿಟೀವ್ ಪತ್ತೆಯಾಗಿತ್ತು. ಈ ಕಾರಣ ಅವರನ್ನು ನೋಡಿಕೊಳ್ಳಲು ಬಂದಿದ್ದ ಸುಳ್ಯ ಮೂಲದ ಶರತ್ ಕುಮಾರ್ ಅವರ ಗಂಟಲು ದ್ರವದ ಪರೀಕ್ಷೆ ನಡೆಸಲಾಗಿತ್ತು. ಈ ನಡುವೆ ಅವರನ್ನು ಆಸ್ಪತ್ರೆಯ ಇನ್ನೊಂದು ರೂಮ್ ಗೆ ಶಿಫ್ಟ್ ಮಾಡಲಾಗಿತ್ತು. ಪರೀಕ್ಷೆಯಲ್ಲಿ ಶರತ್ ಕುಮಾರ್ ಗೆ ಕೊರೊನಾ ನೆಗೆಟಿವ್ ಪತ್ತೆಯಾಗಿದೆ. ಕೊರೊನಾದ ಯಾವುದೇ ಲಕ್ಷಣ ಪತ್ತೆಯಾಗದಿದ್ದರೂ ಶರತ್ ಅವರನ್ನು ಎರಡು ದಿನ ಆಸ್ಪತ್ರೆಯಲ್ಲೇ ನಿಲ್ಲಿಸಲಾಗಿತ್ತು. ಎರಡು ದಿನಗಳ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಅವರ ಆಸ್ಪತ್ರೆ ಬಿಲ್ ನೋಡಿದಾಗ ಒಂದು ಬಾರಿ ಮೂರ್ಛೆ ಹೋದಂತಾಗಿತ್ತು.
ಎರಡು ದಿನ ಆಸ್ಪತ್ರೆಯಲ್ಲಿ ಎರಡು ಜಗ್ ಬಿಸಿ ನೀರು, ಒಂದು ಸಣ್ಣ ಬಾಟಲ್ ಸ್ಯಾನಿಟೈಸರ್ ಗೆ ನೀಡಿದ್ದು ಹೊರತುಪಡಿಸಿ ಶರತ್ ಅವರಿಗೆ ಒಂದು ಮಾತ್ರೆಯನ್ನೂ ನೀಡಿರಲಿಲ್ಲ. ಆಸ್ಪತ್ರೆಯ ಎರಡು ದಿನದ ರೂಮ್ ಬಾಡಿಗೆ 2100 ಸೇರಿದಂತೆ ಒಟ್ಟು ಬಿಲ್ 21,305 ರೂಪಾಯಿಗಳಾಗಿತ್ತು. ಕೇವಲ ಎರಡು ಜಗ್ ಬಿಸಿ ನೀರು, ಒಂದು ಸ್ಯಾನಿಟೈಸರ್ ಗಾಗಿ 21,305 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಆಸ್ಪತ್ರೆಯ ಪ್ರಕಾರ ಬಹುತೇಕ ಚಾರ್ಜ್ ಪಿಪಿಇ ಕಿಟ್ ಗಳದ್ದಾಗಿದ್ದು, ಉಳಿದವು ವೈದ್ಯರ ಹಾಗೂ ನರ್ಸ್ ಗಳ ಭೇಟಿ ನೀಡಿದ ಚಾರ್ಜ್ ಗಳಾಗಿವೆ.