FILM
‘ಕಾಂತಾರ’ ಚಿತ್ರಕ್ಕೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಎಂಟ್ರಿ
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದ ‘ಕಾಂತಾರ’ ಭಾರಿ ಹಿಟ್ ಆಗಿದ್ದು ಈಗ ಇತಿಹಾಸ. ಸಿನಿಮಾದ ಪ್ರೀಕ್ವೆಲ್ ನಲ್ಲಿ ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ‘ಕಾಂತಾರ’ ಸಿನಿಮಾದ ಹತ್ತರಷ್ಟು ಬಜೆಟ್ ಅನ್ನು ಕಾಂತಾರ ಸಿನಿಮಾದ ಪ್ರೀಕ್ವೆಲ್ ಮೇಲೆ ಹೂಡಿಕೆ ಮಾಡಿದೆ ಹೊಂಬಾಳೆ ಫಿಲಮ್ಸ್ ನಿರ್ಮಾಣ ಸಂಸ್ಥೆ. ಅತ್ಯುತ್ತಮ ಗುಣಮಟ್ಟದ ಕಲಾವಿದರು ಹಾಗೂ ತಂತ್ರಜ್ಞರನ್ನು ಸಿನಿಮಾಕ್ಕೆ ಹೆಕ್ಕಿ ತರುತ್ತಿದ್ದಾರೆ ರಿಷಬ್ ಶೆಟ್ಟಿ. ಅದರ ಬೆನ್ನಲ್ಲೆ ಇದೀಗ ಹಾಲಿವುಡ್ನ ಜನಪ್ರಿಯ ಆಕ್ಷನ್ ಕೊರಿಯಾಗ್ರಫರ್ ಒಬ್ಬರನ್ನು ಸಿನಿಮಾ ತಂಡಕ್ಕೆ ಸೇರಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ.
ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ವಿಶ್ವದರ್ಜೆಯ ತಂತ್ರಜ್ಞರನ್ನು ಹೊಂದಿತ್ತು. ಅದೇ ಕಾರಣಕ್ಕೆ ವಿಶ್ವವೇ ಮೆಚ್ಚುವಂಥಹಾ ಸಿನಿಮಾ ಅನ್ನು ರಾಜಮೌಳಿ ನೀಡಿದರು. ಸಿನಿಮಾದ ಆಕ್ಷನ್ ದೃಶ್ಯಗಳಂತೂ ಮೈನವಿರೇಳುವ ಮಾದರಿಯಲ್ಲಿದ್ದವು. ಸಿನಿಮಾದ ತೂಕ ಒಂದಾದರೆ ಸಿನಿಮಾದ ಆಕ್ಷನ್ದು ಮತ್ತೊಂದು ತೂಕ ಎಂಬಂತಿತ್ತು. ಇದೀಗ ‘ಆರ್ಆರ್ಆರ್’ ಸಿನಿಮಾಕ್ಕೆ ಆಕ್ಷನ್ ನಿರ್ದೇಶನ ಮಾಡಿದ್ದ ಆಕ್ಷನ್ ಕೊರಿಯೋಗ್ರಾಫರ್ ಅನ್ನು ‘ಕಾಂತಾರ’ ಪ್ರೀಕ್ವೆಲ್ಗೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಬಲ್ಗೇರಿಯಾದ ಟೂಡೊರ್ ಲ್ಯಾಜರೋವ್ ಎಂಬುವರು ‘ಆರ್ಆರ್ಆರ್’ ಸಿನಿಮಾದ ಆಕ್ಷನ್ ದೃಶ್ಯಗಳಿಗೆ ಕೆಲಸ ಮಾಡಿದ್ದರು. ಎಸ್ಎಸ್ ರಾಜಮೌಳಿ ಸಹ ಸಂದರ್ಶನವೊಂದರಲ್ಲಿ ಇವರ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಅದೇ ಟೂಡೊರ್ ಲ್ಯಾಜರೋವ್, ‘ಕಾಂತಾರ’ ಸಿನಿಮಾಕ್ಕಾಗಿ ಕೆಲಸ ಮಾಡಲಿದ್ದಾರೆ. ಸಿನಿಮಾ ತಂಡದ ಭಾಗವಾಗಲು ಟೂಡೊರ್ ಲ್ಯಾಜರೋವ್ ಬಲ್ಗೇರಿಯಾದಿಂದ ಕುಂದಾಪುರಕ್ಕೆ ಆಗಮಿಸಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಟೂಡೊರ್ ಲ್ಯಾಜರೋವ್ ಒಟ್ಟಿಗೆ ಚಿತ್ರ ಸಹ ಹಂಚಿಕೊಂಡಿದ್ದಾರೆ.
‘ಕಾಂತಾರ’ ಪ್ರೀಕ್ವೆಲ್ ಸಿನಿಮಾದಲ್ಲಿ ಎರಡು ಅತ್ಯಂತ ಪ್ರಮುಖವಾದ ಆಕ್ಷನ್ ದೃಶ್ಯಗಳಿದ್ದು, ಈ ಎರಡೂ ಆಕ್ಷನ್ ಸೀನ್ಗಳನ್ನು ಟುಡೋರ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಆಕ್ಷನ್ ಸನ್ನಿವೇಶಗಳು ಒಂದಕ್ಕಿಂತಲೂ ಒಂದು ಭಿನ್ನವಾಗಿ ಇರಲಿವೆ. ಈ ಹಿಂದೆ ರಿಷಬ್ ಶೆಟ್ಟಿ ಹಂಚಿಕೊಂಡಿದ್ದ ಚಿತ್ರದಲ್ಲಿ ಅವರು ಕಲರಿಪಯಟ್ಟು ಅಭ್ಯಾಸ ಮಾಡುತ್ತಿದ್ದರು. ಸಿನಿಮಾದ ಒಂದು ಆಕ್ಷನ್ ದೃಶ್ಯದಲ್ಲಿ ಕಲರಿಪಯಟ್ಟು ಸಮರ ಕಲೆಯ ಬಳಕೆ ಮಾಡಲಾಗಿದೆ.
‘ಕಾಂತಾರ’ ಪ್ರೀಕ್ವೆಲ್ ನ ಚಿತ್ರೀಕರಣ ಚಾಲ್ತಿಯಲ್ಲಿದ್ದು ಕೆಲವೇ ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಲಿದೆ. 2025 ರ ಮಧ್ಯದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ರಿಷಬ್ ಶೆಟ್ಟಿಯ ಹೊರತಾಗಿ ಇನ್ಯಾರ್ಯಾರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಚಿತ್ರೀಕರಣದ ಮಾಹಿತಿಯನ್ನು ಗೌಪ್ಯವಾಗಿ ಇಟ್ಟಿದ್ದಾರೆ ರಿಷಬ್ ಶೆಟ್ಟಿ.