DAKSHINA KANNADA
“ಮುಸ್ಲಿಂ ವ್ಯಾಪಾರಿಗಳಲ್ಲಿ ಹಿಂದುಗಳು ವ್ಯಾಪಾರ ನಡೆಸಬಾರದು”ಬಹಿರಂಗವಾಗಿ ಕರೆ ನೀಡಿರುವ ಶರಣ್ ಪಂಪ್ ವೆಲ್ ಬಂಧನಕ್ಕೆ ಆಗ್ರಹ..!
ಮಂಗಳೂರು : ಮಂಗಳಾ ದೇವಿ ದೇವಸ್ಥಾನದ ದಸರಾ ಜಾತ್ರೆಯಲ್ಲಿ ಹಿಂದು ವ್ಯಾಪಾರಸ್ಥರ ಮಳಿಗೆಗಳಿಗೆ ಬಲವಂತದಿಂದ ಕೇಸರಿ ಬಾವುಟ ಕಟ್ಟಿ, “ಮುಸ್ಲಿಂ ವ್ಯಾಪಾರಿಗಳಲ್ಲಿ ಹಿಂದುಗಳು ವ್ಯಾಪಾರ ನಡೆಸಬಾರದು” ಬಹಿರಂಗವಾಗಿ ಕರೆ ನೀಡಿರುವ ಬಜರಂಗ ದಳದ ಶರಣ್ ಪಂಪ್ ವೆಲ್ ಮತ್ತು ಗ್ಯಾಂಗನ್ನು ಕೋಮು ಪ್ರಚೋದಕ ಕಠಿಣ ಸೆಕ್ಷನ್ ಗಳಡಿ ಬಂಧಿಸಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಇಂದು ದ ಕ ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ವತಿಯಿಂದ ಮನವಿ ಸಲ್ಲಿಸಲಾಯಿತು.
ಜಾತ್ರೆ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಸ್ಥರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಲಾಯಿತು. ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಕಾರ್ಡ್ ವಿತರಣೆಯನ್ನು ಈ ತಿಂಗಳಾತ್ಯದ ಒಳಗಡೆ ಒದಗಿಸಿ ಸಮಸ್ಯೆ ಬಗೆಹರಿಸಲು ಕೇಳಿಕೊಳ್ಳಲಾಯಿತು.
ನಿಯೋಗದಲ್ಲಿ ಜಂಟಿ ವೇದಿಕೆಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ದಲಿತ ಸಂಘರ್ಷ ಸಮಿತಿಯ ಎಂ ದೇವದಾಸ್, ರಘು ಕೆ ಎಕ್ಕಾರು, ಸಾಮಾಜಿಕ ಕಾರ್ಯಕರ್ತರಾದ ಎಂ ಜಿ ಹೆಗ್ಡೆ, ಯಾಸೀನ್ ಕುದ್ರೋಳಿ, ದ. ಕ, ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ದಿ ಸಂಘದ ಗೌರವಾಧ್ಯಕ್ಷ ಬಿ ಕೆ ಇಮ್ತಿಯಾಜ್, ಪದಾಧಿಕಾರಿಗಳಾದ ಮುಸ್ತಫಾ, ಶ್ರೀನಿವಾಸ್, ಹಿರಿಯ ಕಾರ್ಮಿಕ ನಾಯಕರಾದ ವಿ ಕುಕ್ಯಾನ್, ಕರುಣಾಕರ ಮಾರಿಪಳ್ಳ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಾಮರಸ್ಯ ಮಂಗಳೂರು ಇದರ ಮಂಜುಳಾ ನಾಯಕ್, ಸಮರ್ಥ್ ಭಟ್ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.
ಉಸ್ತುವಾರಿ ಸಚಿವರಿಗೆ ನೀಡಿದ ಮನವಿಯ ಸಾರಾಂಶ ಹೀಗಿದೆ..
ರಿಗೆ, ಶ್ರೀ ದಿನೇಶ್ ಗುಂಡೂರಾವ್
ಉಸ್ತುವಾರಿ ಸಚಿವರು, ದಕ್ಷಿಣ ಕನ್ನಡ
ಹಿಂದು, ಮುಸ್ಲಿಂ ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿರುವ
ಶರಣ್ ಪಂಪ್ ವೆಲ್ ಹಾಗೂ ಸಹಚರರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು, ಸೌಹಾರ್ದತೆ ಕದಡದಂತೆ ಕಾರ್ಯಕ್ರಮ ರೂಪಿಸಲು ಮನವಿ
ಮಂಗಳೂರಿನ ಇತಿಹಾಸ ಪ್ರಸಿದ್ದ ಮಂಗಳಾ ದೇವಿ ದೇವಸ್ಥಾನದ ದಸರಾ ಉತ್ಸವ ಮಂಗಳೂರಿನ ಎಲ್ಲಾ ಸಮುದಾಯಗಳು ಸಂಭ್ರಮಿಸುವ ಹಬ್ಬವಾಗಿ ಕಳೆದ ಶತಮಾನದಿಂದಲೇ ಖ್ಯಾತಿ ಪಡೆದಿದೆ. ದಸರಾದ ಕೊನೆಯ ದಿನ ತುಳುನಾಡಿನಾದ್ಯಂತದ ಮಾರ್ನಮಿ ಹುಲಿವೇಷ ತಂಡಗಳು ಜಳಕ (ವೇಷ ಕಳಚುವ) ಕಾರ್ಯಕ್ರಮಕ್ಕಾಗಿ ಮಂಗಳಾ ದೇವಿ ದೇವಸ್ಥಾನದ ಉತ್ಸವಕ್ಕೆ ಆಗಮಿಸುವುದು, ಅಂದು ಹಿಂದು, ಮುಸ್ಲಿಂ, ಕ್ರೈಸ್ತರು ಸೇರಿದಂತೆ ತುಳುನಾಡಿನ ಎಲ್ಲಾ ಜಾತಿ, ಧರ್ಮಗಳ ಜನ ಅಲ್ಲಿ ಸೇರಿ ಸಂಭ್ರಮಿಸುವುದು ಅನಾದಿ ಕಾಲದಿಂದಲೂ ನಡೆದಕೊಂಡುಬಂದಿದೆ. ಅಲ್ಲಿ ಸೇರುವ ಜನರು, ಅಲ್ಲಿ ನೆರೆಯುವ ಸಂತೆಗೆ ಯಾವುದೇ ಧರ್ಮ, ಜಾತಿ, ಪಂಗಡಗಳ ಹಂಗು, ರಂಗು ಯಾವತ್ತೂ ಇರಲಿಲ್ಲ. ಮುಸ್ಲಿಂ ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬ ಸಮೇತ ಮಂಗಳಾ ದೇವಿ ದಸರಾ ಹುಲಿ ವೇಷಗಳು, ಬಣ್ಣದ ಬೆಳಕು, ಸಂತೆಗಳನ್ನು ನೋಡಲು ನಿರ್ಭಯವಾಗಿ ಭಾಗಿಗಳಾಗುವುದು ಮಂಗಳಾದೇವಿ ದೇವಳ, ಹಾಗೂ ಅಲ್ಲಿನ ದಸರಾ ಉತ್ಸವದ ಸೌಹಾರ್ದತೆ, ಜಾತಿ, ಧರ್ಮಗಳನ್ನು ಮೀರಿ ಒಳಗೊಳ್ಳುವ ಗುಣಕ್ಕೆ ಸಾಕ್ಷಿ.
ಇಂತಹ ಬಹುದೊಡ್ಡ ಖ್ಯಾತಿಯುಳ್ಳ ಕ್ಷೇತ್ರ ಹಾಗೂ ಆ ಕ್ಷೇತ್ರದ ಪ್ರಖ್ಯಾತ ದಸರಾ ಉತ್ಸವವನ್ನೇ ಗುರಿಯಾಗಿಸಿ ವಿಎಚ್ ಪಿ, ಬಜರಂಗ ದಳವನ್ನು ಚೂ ಬಿಟ್ಟು ಮತೀಯ ಸೌಹಾರ್ದತೆಯನ್ನು ಕದಡುವ ಕೆಲಸ ಬಹಿರಂವಾಗಿಯೇ ನಡೆಯತೊಡಗಿದೆ. ಅದರ ಭಾಗವಾಗಿಯೇ ಮುಸ್ಲಿಂ ಜಾತ್ರೆ ವ್ಯಾಪರಿಗಳಿಗೆ ಮಂಗಳಾದೇವಿ ದಸರಾ ಸಂತೆಯಲ್ಲಿ ಬೀದಿ ಬದಿಯಲ್ಲಿ ಅಂಗಡಿ ಮಳಿಗೆ ನೀಡದಂತೆ ದೇವಸ್ತಾನ ಆಡಳಿತ ಮಂಡಳಿಗೆ ಮನವಿ ಮಾದರಿಯಲ್ಲಿ ಬೆದರಿಕೆ ಪತ್ರ ನೀಡಲಾಯಿತು. ಆ ಮೂಲಕ ಜನರ ನಡುವೆ ಗೊಂದಲ ಮೂಡಿಸಲು ಯತ್ನಿಸಲಾಯಿತು. ಜಿಲ್ಲಾಡಳಿತದ ಮಧ್ಯಪ್ರವೇಶದ ನಂತರ ಆ ಪ್ರಯತ್ನ ವಿಫಲಗೊಂಡು ಹಿನ್ನಡೆ ಅನುಭವಿಸಿ ನಂತರ ಮಂಗಳಾ ದೇವಿ ದೇವಸ್ಥಾನದ ಮುಂಭಾಗದ ನಗರ ಪಾಲಿಕೆ ಜಾಗದಲ್ಲಿ ಹಾಕಲಾದ ಜಾತ್ರೆ ವ್ಯಾಪಾರದ ಸ್ಟಾಲ್ ಗಳಲ್ಲಿ ಹಿಂದು ಧರ್ಮೀಯ ವ್ಯಾಪಾರಿಗಳ ಮಳಿಗೆಗಳನ್ನು ಹುಡುಕಿ ಬಲವಂತವಾಗಿ ಕೇಸರಿ ಧ್ವಜ ಕಟ್ಟುವ, ಆ ಮೂಲಕ ಮುಸ್ಲಿಂ ವ್ಯಾಪಾರಿಗಳನ್ನು ಪ್ರತ್ಯೇಕಿಸುವ, ಕೇಸರಿ ಬಾವುಟ ಕಟ್ಟಿರುವ ಮಳಿಗೆಗಳಲ್ಲಿ ಮಾತ್ರ ಹಿಂದುಗಳು ಖರೀದಿ ನಡೆಸುವಂತೆ, ಮುಸ್ಲಿಂ ಸಂತೆ ವ್ಯಾಪಾರಿಗಳೊಂದಿಗೆ ವ್ಯಾಪಾರ ನಡೆಸದೆ ಬಹಿಷ್ಕಾರ ಹಾಕುವಂತೆ ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ಬಜರಂಗ ದಳದ ಮುಖಂಡರು ಬಹಿರಂಗ ಕರೆ ನೀಡಿರುತ್ತಾರೆ.
ಇದು ಸಂವಿಧಾನದ ನಿಯಮಗಳ, ಕ್ರಿಮಿನಲ್ ಕಾನೂನುಗಳ ಸ್ಪಷ್ಟ ಉಲ್ಲಂಘನೆ. ಸಮುದಾಯವೊಂದನ್ನು ಬಹಿಷ್ಕರಿಸುವುದು, ಬಹಿರಂಗವಾಗಿ ಬಹಿಷ್ಕಾರಕ್ಕೆ ಕರೆ ನೀಡುವುದು ಜಾಮೀನು ರಹಿತ ಅಪರಾಧವಾಗಿದೆ. ಶರಣ್ ಪಂಪ್ ವೆಲ್ ನೇತೃತ್ವದ ಬಜರಂಗ ದಳದ ಕುಖ್ಯಾತ ಗ್ಯಾಂಗ್ ಪದೇ ಪದೆ ಇಂತಹ ಸೌಹಾರ್ದ ಕದಡುವ, ದ್ವೇಷ ಹರಡುವ ಕ್ರಿಮಿನಲ್ ಕೃತ್ಯಗಳನ್ನು ಎಸಗುತ್ತಲೇ ಬಂದಿದೆ. ಆದರೆ, ಕಾನೂನು ಪಾಲಕರು ಈ ಕುರಿತು ತೀರಾ ಮೃದು ಧೋರಣೆ ತಳೆಯುತ್ತಿರುವುದು ಜನಸಾಮಾನ್ಯರಲ್ಲಿ ಶಾಂತಿ ಕದಡುವ ಆತಂಕಕ್ಕೆ ಕಾರಣವಾಗಿದೆ. ಕೋಮುವಾದಿ ಕ್ರಿಮಿನಲ್ ಗಳು ತಮ್ಮ ಗೂಂಡಾಗಿರಿಯನ್ನು ಎಗ್ಗಿಲ್ಲದೆ ಮುಂದುವರಿಸಲು ಅವಕಾಶ ಒದಗಿಸಿದೆ. ಈ ಬಾರಿಯಂತು ಒಂದು ಹೆಜ್ಜೆ ಮುಂದೆ ಹೋಗಿ ಇತಿಹಾಸ ಪ್ರಸಿದ್ದ ಮಂಗಳಾ ದೇವಿ ದೇವಳದ ದಸರಾ ಉತ್ಸವವನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಇಂತಹ ಗಂಭೀರ ಪ್ರಕರಣವನ್ನು ಲಘುವಾಗಿ ಕಾಣಬಾರದು, ಕಾನೂನಿನ ಕಠಿಣ ನಿಯಮಗಳಡಿ ತಕ್ಷಣವೇ ಪ್ರಕರಣ ದಾಖಲಿಸಿ ಶರಣ್ ಪಂಪ್ ವೆಲ್ ಮತ್ತು ಅವರ ಜೊತೆಗಾರರಾದ ಕ್ರಿಮಿನಲ್ ಗುಂಪುನ್ನು ಬಂಧಿಸಿ ಜೈಲಿಗಟ್ಟ ಬೇಕು ಎಂದು “ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ” ಬಲವಾಗಿ ಆಗ್ರಹಿಸುತ್ತದೆ. ಇಂತಹ ಕ್ರಮಗಳಿಲ್ಲದೆ ಮುಂದಕ್ಕೆ ಶಾಂತಿ ಕದಡುವ ಘಟನೆಗಳು ಜರುಗಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ವೇದಿಕೆ ಎಚ್ಚರಿಸಿದೆ.
ಮುಂಬರುವ ಲೋಕಸಭೆ ಚುನಾವಣೆಯ ಸಿದ್ದತೆಯ ಭಾಗವಾಗಿಯೇ ಈ ಎಲ್ಲಾ ಘಟನೆಗಳು ನಡೆಯುತ್ತಿವೆ. ಶರಣ್ ಪಂಪ್ ವೆಲ್ ಸೇರಿದಂತೆ ಬಜರಂಗ ದಳದ ಕಾರ್ಯಕರ್ತರನ್ನು ಚೂ ಬಿಟ್ಟು ಬಿಜೆಪಿ ಮತೀಯ ಉದ್ವಿಗ್ನತೆ ಕೆರಳಿಸಲು, ಧರ್ಮದ ಆಧಾರದಲ್ಲಿ ಮತಗಳ ಧ್ರುವೀಕರಣಕ್ಕೆ ಬಿಜೆಪಿ ಇಂತಹ ಅಪಾಯಕಾರಿ ಅಟಕ್ಕೆ ಮುಂದಾಗಿದೆ. ಸೌಹಾರ್ದತೆಗೆ ಮಾದರಿಯಾಗಿರುವ ಮಂಗಳಾ ದೇವಿ ದೇವಳದ ದಸರಾದಲ್ಲಿ ಯಶಸ್ಸು ಕಂಡರೆ ಮುಂಬರುವ ಚುನಾವಣೆಯವರಗೆ ಎಲ್ಲಾ ಧಾರ್ಮಿಕ, ಸಾಂಸ್ಕ್ರತಿಕ ಉತ್ಸವಗಳಲ್ಲಿ ಇದೇ ಮಾದರಿಯನ್ನು ಬಿಜೆಪಿ ಅನುಸರಿಸಲಿದೆ. ವಿಫಲ ಅಡಳಿತ, ಜನರ ವಿರೋಧ ಕಟ್ಟಿಕೊಂಡಿರುವ ಬಿಜೆಪಿ ಚುನಾವಣಾ ಗೆಲುವಿಗಾಗಿ ಮಂಗಳಾ ದೇವಿ ದೇವಸ್ತಾನ, ದಸರಾ ಉತ್ಸವದಂತಹ ಪವಿತ್ರ ಕ್ಷೇತ್ರ, ಉತ್ಸವಗಳ ಹೆಸರು ಕೆಡಿಸಲು ಮುಂದಾಗಿದೆ. ಜಾತ್ಯಾತೀತ ಸಿದ್ದಾಂತವಾದಿಯಾಗಿರುವ, ದ ಕ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಾನ್ಯ ದಿನೇಶ್ ಗುಂಡೂರಾವ್ ರವರು ಇಂತಹ ಕೆಟ್ಟ, ದುರಾಲೋಚನೆಯ, ಮತೀಯ ದ್ವೇಷದ ರಾಜಕಾರಣಕ್ಕೆ ಕಡಿವಾಣ ಹಾಕಲು ದೃಢ ಕ್ರಮಗಳನ್ನು ಜರುಗಿಸಬೇಕು, ಐಕ್ಯತೆ, ಸೌಹಾರ್ದತೆಯ ಪರಂಪರೆಯನ್ನು ಎತ್ತಿಹಿಡಿಯಲು ಮುಂದಾಗಬೇಕು ಎಂದು ವೇದಿಕೆಯು ಮನವಿ ಮಾಡುತ್ತದೆ.
ಮುನೀರ್ ಕಾಟಿಪಳ್ಳ
ಪ್ರಧಾನ ಕಾರ್ಯದರ್ಶಿ
ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷಗಳು, ಸಂಘಟನೆಗಳ ಜಂಟಿ ವೇದಿಕೆ, ಮಂಗಳೂರು