BANTWAL
ಲೋಕಸಭೆಗೆ ಅಯೋಧ್ಯೆ ಕರಸೇವಕ ಸತ್ಯಜಿತ್ ಹೆಸರು ಮುಂಚೂಣಿಯಲ್ಲಿ…ಅಭಿಮಾನಿ ಬಳಗದ ರಹಸ್ಯ ಮೀಟಿಂಗ್…!!
ಮಂಗಳೂರು ಫೆಬ್ರವರಿ 1: ಲೊಕಾಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕರಾವಳಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಪ್ರಮುಖ ಆಡಳಿತ ಪಕ್ಷ ಬಿಜೆಪಿಯಲ್ಲಿ ಬಂಡಾಯದ ಗಾಳಿ ಬೀಸತೊಡಗಿದೆ. ಆರಂಭದಿಂದಲೂ ಸತತವಾಗಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗುತ್ತಿರುವ ಹಿಂದೂ ಪರ ಹೋರಾಟಗಾರ ಸತ್ಯಜೀತ್ ಸುರತ್ಕಲ್ ಹೆಸರು ಈ ಬಾರಿ ಚಾಲ್ತಿಯಲ್ಲಿದೆ. ದ.ಕ ಬಿಜೆಪಿ ಟಿಕೆಟ್ ಗಾಗಿ ಹಿಂದುತ್ವದ ಪ್ರಭಾವಿ ನಾಯಕ ಸತ್ಯಜಿತ್ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ.
ಈ ಬಾರಿ ಸತ್ಯಜೀತ್ ಸುರತ್ಕಲ್ ಅವರಿಗೆ ಟಿಕೆಟ್ ಕೊಡಲೇಬೇಕೆಂಬ ಕೂಗು ಕೂಡ ಜೋರಾಗಿಯೇ ಇದ್ದು ಸತ್ಯಜಿತ್ ಅಭಿಮಾನಿ ಬಳಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ರಹಸ್ಯ ಮೀಟಿಂಗ್ ಕೂಡ ಮಾಡಿದೆ. ಬಿಸಿ ರೋಡಿನ ಮಠ ಎಂಬಲ್ಲಿ ಹಿಂದೂ ಜಾಗರಣಾ ವೇದಿಕೆ ಸಂಘಟನೆಯ ಪ್ರಮುಖನೋರ್ವನ ಮನೆಯಲ್ಲಿ ಈ ಗೌಪ್ಯ ಸಭೆ ನಡೆದಿದ್ದು ಜಿಲ್ಲೆ 8 ವಿಧಾನ ಸಭಾ ಕ್ಷೇತ್ರದ ಮ್ರಮುಖರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಸಭೆಯಲ್ಲಿ ಟಿಕೆಟ್ ಅಕಾಂಕ್ಷಿ, ಬಿಲ್ಲವ ಸಮಾಜದ ನಾಯಕ ಸತ್ಯಜಿತ್ ಸುರತ್ಕಲ್ ಕೂಡ ಭಾಗಿಯಾಗಿದ್ದು ಫೆ. 25 ರಂದು ಜಿಲ್ಲೆಯಲ್ಲಿ ಸತ್ಯಜಿತ್ ಪರ ಬ್ರಹತ್ ಹಕ್ಕೊತ್ತಾಯ ಸಮಾವೇಶ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯ ಬಿಜೆಪಿ ಹಾಗೂ ದೆಹಲಿಯ ಹೈಕಮಾಂಡ್ ಮುಂದೆ ಈ ಬಗ್ಗೆ ಪ್ರಬಲವಾದ ಬೇಡಿಕೆ ಇಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ತಾಲೂಕು ಹಾಗೂ ವಾರ್ಡ್ ಕಮಿಟಿಗಳ ರಚನೆ ಮಾಡಿ ಜಿಲ್ಲಾ ವಾರ್ಡು ತಾಲೂಕು ವಾರ್ಡ್ ಮತ್ತು ಗ್ರಾಮ ಮಟ್ಟದ ವಾರ್ಡ್ ಗಳಿಗೆ ಸಂಚಾಲಕರ ನೇಮಕಕ್ಕೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಹಿಂಜಾವೇ ಕಾರ್ಯಕರ್ತರು, ಬೇರೆ ಬೇರೆ ಸಂಘಟನೆಯ ಕಾರ್ಯಕರ್ತರು, ಬಿಲ್ಲವ ಪ್ರಮುಖರನ್ನು ಗುರುತಿಸಿ ಕಮಿಟಿ ರಚನೆ ಮಾಡಿ ಈ ಮೂಲಕ ಸಭೆಗಳನ್ನು ನಡೆಸಿ ಕಾರ್ಯಕರ್ತರ ಸಂಘಟನೆ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.ಪ್ರಚಾರದ ದೃಷ್ಟಿಯಿಂದ ಸೋಷಿಯಲ್ ಮೀಡಿಯಾ ತಂಡ ರಚನೆ ಮಾಡುವ ಕುರಿತು ತೀರ್ಮಾಣ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಕಳೆದ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಮಂಗಳೂರು ಉತ್ತರ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಸತ್ಯಜಿತ್ ಸುರತ್ಕಲ್ ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ಜೊತೆ ಮುನಿಸಿಕೊಂಡಿದ್ದರು.ಬಿಲ್ಲವ ಸಮಾಜದ ಪ್ರಭಾವಿ ನಾಯಕರೂ ಆಗಿರುವ ಸತ್ಯಜೀತ್ ಈ ಬಾರಿ ಮತ್ತೆ ಲೋಕಸಭಾ ಟಿಕೆಟ್ ಗಾಗಿ ಅಖಾಡಕ್ಕೆ ಇಳಿದಿದ್ದಾರೆ.ಈ ಮಧ್ಯೆ ಪುತ್ತೂರಿನ ಹಿಂದೂ ಮುಖಂಡ ಅರುಣ್ ಪುತ್ತಿಲರೂ ಈ ಬಾರಿಯ ಲೋಕಸಭಾ ಕ್ಷೇತ್ರ ಟಿಕೆಟ್ ಅಕಾಂಕ್ಷಿಯಾಗಿದ್ದಾರೆ. ಹಿಂದೂ ನಾಯಕರ ಟಿಕೆಟ್ ಫೈಟ್ ಕರಾವಳಿ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.