LATEST NEWS
ಕರಾವಳಿಯಲ್ಲಿ ಕಡಲಬ್ಬರ – ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ವಾರ್ನಿಂಗ್
ಮಂಗಳೂರು ಅಗಸ್ಟ್ 7: ಕರಾವಳಿ ಸುರಿಯುತ್ತಿರುವ ಭಾರಿ ಮಳೆ ಜೊತೆಗೆ ಕಡಲ ಅಬ್ಬರವೂ ಹೆಚ್ಚಾಗಿದೆ. ಭಾರೀ ಮಳೆಯ ಕಾರಣ ಕಡಲು ತೀರಗಳಲ್ಲಿ ಅಲೆಗಳ ಆರ್ಭಟ ಹೆಚ್ಚಾಗುತ್ತಿದೆ. ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ ಕಡಲ ತೀರದಲ್ಲಿ ಕಡಲ್ಕೊರೆತ ಹೆಚ್ಚಾಗುತ್ತಿದೆ. ಉಚ್ಚಿಲ- ಬಟ್ಟಪ್ಪಾಡಿ ಸಂಪರ್ಕಿಸುವ ರಸ್ತೆ ಬಹುತೇಕ ಕುಸಿದುಬಿದ್ದಿದೆ. ಕಡಲ್ಕೊರೆತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ತೀರದಲ್ಲಿರುವ ನಾಲ್ಕೈದು ಕುಟುಂಬಗಳು ತಮ್ಮ ಮನೆಯಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಕಡಲ ತೀರದ ಹತ್ತಾರು ಮನೆಗಳು ಕುಸಿದು ಬೀಳುವ ಅಪಾಯದಲ್ಲಿದೆ.
ಈ ನಡುವೆ ಮಂಗಳೂರಿನಿಂದ ಕಾರವಾರದವರೆಗಿನ ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಇಂದು ರಾತ್ರಿ 11:30ರವರೆಗೆ ಬಲವಾದ ಗಾಳಿ ಬೀಸಲಿದ್ದು, ಇದರಿಂದ ಅರಬಿಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ದಡವನ್ನು ಅಪ್ಪಳಿಸಲಿದೆ ಎಂದು ಭಾರತ ಹವಾಮಾನ ಇಲಾಖೆ ಹಾಗೂ ಬೆಂಗಳೂರಿನ ವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. ಕರ್ನಾಟಕ ಕರಾವಳಿಯುದ್ದಕ್ಕೂ ಗಂಟೆಗೆ 50 ರಿಂದ 60 ಕಿಲೋ ಮೀಟರ್ ವೇಗದ ಗಾಳಿ ಬೀಸುವ ಸಂಭವವಿದ್ದು, ಇದರಿಂದ 3.5ರಿಂದ 5.7ಮಿ. ಎತ್ತರದ ಅಲೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿ ಪಶ್ಚಿಮ ಕರಾವಳಿಯ ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಅದು ತಿಳಿಸಿದೆ.