KARNATAKA
ಹಿಜಾಬ್ ತೀರ್ಪು ನೀಡಿದ ಮೂವರು ನ್ಯಾಯಾಧೀಶರಿಗೆ ‘ವೈ’ ದರ್ಜೆ ಭದ್ರತೆ – ಸಿಎಂ
ಬೆಂಗಳೂರು ಮಾರ್ಚ್ 20: ವಿವಾದಿತ ಹಿಜಬ್ ಕುರಿತಂತೆ ತೀರ್ಪು ನೀಡಿರುವ ರಾಜ್ಯ ಹೈಕೋರ್ಟ್ ನ ಮೂವರು ನ್ಯಾಯಾಧೀಶರಿಗೆ ವೈ ದರ್ಜೆಯ ಭದ್ರತೆ ನೀಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಹಿಜಾಬ್ ವಿವಾದ ಕುರಿತು ತೀರ್ಪು ನೀಡಿದ ಮೂವರು ನ್ಯಾಯಾಧೀಶರನ್ನು ಹತ್ಯೆ ಮಾಡುವುದಾಗಿ ಮಧುರೈಯಲ್ಲಿ ಸಂಘಟನೆಯೊಂದು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬೆದರಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ಮಧುರೈ ಘಟನೆಯನ್ನು ಖಂಡಿಸದೆ ಇರುವ ವಿರೋಧ ಪಕ್ಷ ನಾಯಕರನ್ನು ನಕಲಿ ಜಾತ್ಯತೀತವಾದಿಗಳು ಎಂದು ಸಹ ಮುಖ್ಯಮಂತ್ರಿ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಟೀಕಿಸಿದ್ದಾರೆ. ದುರ್ಘಟನೆ ನಡೆದು ಮೂರ್ನಾಲ್ಕು ದಿನಗಳಾದರೂ ಡೋಂಗಿ ಜಾತ್ಯತೀತವಾದಿಗಳು ಯಾಕೆ ಮೌನವಾಗಿದ್ದಾರೆ, ಹಿಜಾಬ್ ವಿರುದ್ಧವಾಗಿ ತೀರ್ಪು ನೀಡಿದ ನ್ಯಾಯಾಧೀಶರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಇಷ್ಟಾದ ಮೇಲೆ ಕೂಡ ವಿರೋಧ ಪಕ್ಷಗಳ ನಾಯಕರು ಮೌನವಾಗಿ ಕುಳಿತಿದ್ದಾರೆ ಎಂದರೆ ಯಾರನ್ನು ನೀವು ಒಲಿಸಿಕೊಳ್ಳಲು ನೋಡುತ್ತಿದ್ದೀರಿ, ಇದು ಜಾತ್ಯತೀತತೆ ಅಲ್ಲ, ಇದು ಕೋಮುವಾದ, ನಾನು ಈ ಮೌನವನ್ನು ಖಂಡಿಸುತ್ತೇನೆ, ನೀವು ಈ ಬಗ್ಗೆ ಮೌನ ಮುರಿದು ಮಾತನಾಡಲೇ ಬೇಕು, ಈ ವಿಚಾರದಲ್ಲಿ ನಾವೆಲ್ಲರೂ ಒಟ್ಟಾಗಬೇಕು ಎಂದು ಸಿಎಂ ಹೇಳಿದರು.