KARNATAKA
ಇಸ್ಲಾಂ ಮತಾಂತರಕ್ಕೆ ಯತ್ನಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್..!
ಬೆಂಗಳೂರು : ಉದ್ಯೋಗ ಕೊಡಿಸುವ ನೆಪದಲ್ಲಿ ವಿವಾಹಿತ ದಲಿತ ಮಹಿಳೆಯೊಬ್ಬರನ್ನು ಪುಸಲಾಯಿಸಿ ಜಿಲ್ಲಾ ಕೇಂದ್ರವೊಂದಕ್ಕೆ ಕರೆದೊಯ್ದು ಆಕೆಯನ್ನು ಬಾಡಿಗೆ ಮನೆಯಲ್ಲಿ ಕೂಡಿ ಹಾಕಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸಿದ ಹಾಗೂ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಜಾಮೀನು ನಿರಾಕರಿಸಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿಯ ರಫೀಕ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.
“ಈ ಪ್ರಕರಣದಲ್ಲಿ ಆರೋಪಿಯು, ಅಮಾಯಕ ಮತ್ತು ಬಡ ದಲಿತ ಮಹಿಳೆಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಜಿಲ್ಲಾ ಕೇಂದ್ರದ ನಗರವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮನೆಯೊಂದರಲ್ಲಿ ಆಕೆಯನ್ನು ಕಣ್ಗಾವಲಿನಲ್ಲಿ ಇರಿಸಿ ಬಲವಂತದ ಮತಾಂತರಕ್ಕೆ ಪ್ರಯತ್ನಿಸಿದ್ದಾರೆ. ಅಂತೆಯೇ, ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪವೂ ಇರುವ ಕಾರಣ ಇದೊಂದು ಗಂಭೀರವಾದ ಪ್ರಕರಣ” ಎಂದು ಪೀಠ ಅಭಿಪ್ರಾಯಪಟ್ಟಿದೆ.
“ಇಂತಹ ಕೆಟ್ಟ ಬೆಳವಣಿಗೆ ಹಾಗೂ ಚಟುವಟಿಕೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಮತ್ತು ನಿಯಂತ್ರಿಸುವಲ್ಲಿ ನ್ಯಾಯಾಲಯಗಳು ಸೂಕ್ಷ್ಮವಾಗಿರಬೇಕು. ಆರೋಪಿಗಳ ಜಾಮೀನು ಅರ್ಜಿಗಳನ್ನು ಪರಿಗಣಿಸುವಾಗ, ಅಪರಾಧದ ಸ್ವರೂಪ, ಪ್ರಕರಣದ ಗಂಭೀರತೆ ಮತ್ತು ಆರೋಪಿಗೆ ಜಾಮೀನು ನೀಡಿದರೆ ಉಂಟಾಗಬಹುದಾದ ಸಾಮಾಜಿಕ ಪರಿಣಾಮಗಳನ್ನು ಎಚ್ಚರದಿಂದ ಗಮನಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
“ಇಂತಹ ಚಟುವಟಿಕೆಗಳನ್ನು ತಡೆಗಟ್ಟುವ ಮತ್ತು ಸಮಾಜದ ಮುಗ್ಧ, ಹಿಂದುಳಿದ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲು ನ್ಯಾಯಾಲಯಗಳು ಜಾಗೃತವಾಗಿವೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವುದು ಅಗತ್ಯವಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2024ರ ಮೇ 21ರಂದು ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯು ಪರಿಶಿಷ್ಟ ಜಾತಿ–ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ–2015ರ ಸೆಕ್ಷನ್ 14ಎ (2)ರ ಅಡಿಯಲ್ಲಿ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.
ಕಾರ್ಕಳ ಹಿಂದೂ ಯುವತಿ ಗ್ಯಾಂಗ್‌ರೇಪ್ ಪ್ರಕರಣದ ತನಿಖೆ ‘NIA’ ಗೆ ಒಪ್ಪಿಸಲು ಬಿಜೆಪಿ ಮಹಿಳಾ ಮೋರ್ಚಾ ಆಗ್ರಹ
Pingback: ಕಾರ್ಕಳ ಹಿಂದೂ ಯುವತಿ ಗ್ಯಾಂಗ್‌ರೇಪ್ ಪ್ರಕರಣದ ತನಿಖೆ 'NIA' ಗೆ ಒಪ್ಪಿಸಲು ಬಿಜೆಪಿ ಮಹಿಳಾ ಮೋರ್ಚಾ ಆಗ್ರಹ - theman