DAKSHINA KANNADA
ಅಸಹಾಯಕರ ಸಂಜೀವಿನಿ ಸುಹಾಸ್ ಹೆಗ್ಡೆ…

ಮಂಗಳೂರು,ಸೆಪ್ಟಂಬರ್ 12:ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೊನೆಗೂ ಬಾಂಬೆ ಬ್ಲಡ್ ದೊರೆತಿದೆ. ಉಡುಪಿ ಜಿಲ್ಲೆಯ ನಂದಳಿಕೆಯ ಸುಹಾಸ್ ಹೆಗ್ಡೆ ಎಂಬವರು ರಕ್ತದಾನದ ಮೂಲಕ ರಕ್ತವನ್ನು ನೀಡಿದ್ದಾರೆ. ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ರಕ್ತದ ಗುಂಪಿಗಾಗಿ ನಿರಂತರ ಸಹಾಯ ಕೋರಿ ಸಂದೇಶ ರವಾನಿಸಲಾಗುತ್ತಿತ್ತು.
ಇಂದು ಸುಹಾಸ್ ಹೆಗ್ಡೆಯವರು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತಹ ಅಂಕೋಲದ ದೇವದಾಸ್ ನಾಗಪ್ಪ ಅವರಿಗೆ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕರ್ನಾಟಕದಲ್ಲಿ ಕೆಲವೇ ಸಂಖ್ಯೆಯಲ್ಲಿರುವ ಈ ರಕ್ತದ ಗುಂಪಿನ ಜನರಲ್ಲಿ ಸುಹಾಸ್ ಹೆಗ್ಡೆಯವರೂ ಒಬ್ಬರಾಗಿದ್ದಾರೆ.

ಸಂಕಲ್ಪ್ ಇಂಡಿಯಾ ಫೌಂಡೇಶನ್ ಮೂಲಕ ಈ ರಕ್ತದ ಗುಂಪಿನ ಮಂದಿ ಕಾರ್ಯಾಚರಿಸುತ್ತಿದ್ದು, ಅಗತ್ಯ ಬಿದ್ದವರಿಗೆ ರಕ್ತದಾನವನ್ನು ಮಾಡುವ ಕಾರ್ಯವನ್ನು ಕಳೆದ ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಸುಹಾಸ್ ಹೆಗ್ಡೆ ಉಡುಪಿ ಜಿಲ್ಲೆಯ ನಂದಳಿಕೆಯವರಾಗಿದ್ದು, ಸರಳಾ ವುಡ್ಸ್ ಎನ್ನುವ ಸ್ವಂತ ಕಂಪನಿಯನ್ನೂ ನಡೆಸಿಕೊಂಡು ಬರುತ್ತಿದ್ದಾರೆ.
ಸುಹಾಸ್ ಹೆಗ್ಡೆ ಈ ವರೆಗೆ 30 ಬಾರಿ ರಕ್ತದಾನವನ್ನು ಮಾಡಿದ್ದು, ದೇಶದ ಹಾಗೂ ರಾಜ್ಯದ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ಇವರ ದೂರವಾಣಿ ಸಂಖ್ಯೆಯೂ ಇದೆ. ರಾಜ್ಯದಲ್ಲಿ ಕೇವಲ 7 ರಿಂದ 8 ಜನ ಮಾತ್ರ ಈ ರಕ್ತದ ಗುಂಪಿನವರಿದ್ದು, ಅವಶ್ಯಕತೆಯಿರುವ ಜನರಿಗೆ ತನ್ನ ರಕ್ತದ ಮೂಲಕ ಸಂಜೀವಿನಿಯನ್ನು ನೀಡಿಕೊಂಡು ಬರುತ್ತಿರುವವರಲ್ಲಿ ಸುಹಾಸ್ ಹೆಗ್ಡೆಯೂ ಒಬ್ಬರು. ಎಲ್ಲಿ ಅವರ ಅವಶ್ಯಕತೆಯಿದೆಯೋ ಅಲ್ಲಿ ಹಾಜರಿರುವ ವಿಶೇಷ ವ್ಯಕ್ತಿತ್ವದವರು.
ಅಂದ ಹಾಗೆ ಏನಿದು ಬಾಂಬೆ ಬ್ಲಡ್ ಗ್ರೂಪ್ ಹಾಗೂ ಏನೀ ಬ್ಲಡ್ ಗ್ರೂಪ್ ನ ವಿಶೇಷತೆ ಎನ್ನೋದನ್ನು ತಿಳಿಯುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
*ಅಪರೂಪದ ರಕ್ತದ ಗುಂಪು ‘ಬಾಂಬೆ ಬ್ಲಡ್’ *
ಮನುಷ್ಯನ ದೇಹದಲ್ಲಿ ಎ, ಬಿ, ಒ, ಎಬಿ ಪಾಸಿಟಿವ್ ಮತ್ತು ಎ, ಬಿ, ಒ,ಎಬಿ ನೆಗೆಟಿವ್ ಹಾಗೂ ಬಾಂಬೆ ಬ್ಲಡ್ ಸೇರಿದಂತೆ ಒಟ್ಟು ಒಂಬತ್ತು ರಕ್ತದ ಗುಂಪುಗಳಿವೆ.
ಸಾಮಾನ್ಯವಾಗಿ ಎ ಪಾಸಿಟಿವ್, ಬಿ ಪಾಸಿಟಿವ್, ಒ ಪಾಸಿಟಿವ್ ಮತ್ತು ಎಬಿ ಪಾಸಿಟಿವ್ ಗುಂಪಿನ ರಕ್ತ ಪಡೆಯಲು ಅಷ್ಟೇನೂ ಕಷ್ಟವಾಗುವುದಿಲ್ಲ. ಆದರೆ ಎ ನೆಗೆಟಿವ್, ಬಿ ನೆಗೆಟಿವ್, ಒ ನೆಗೆಟಿವ್ ಮತ್ತು ಎಬಿ ನೆಗೆಟಿವ್ ಗುಂಪಿನ ರಕ್ತ ದೊರೆಯುವುದು ಸ್ವಲ್ಪ ಕಷ್ಟ. ಅದರಲ್ಲೂ ‘ಎಬಿ ನೆಗೆಟಿವ್’ ಗುಂಪಿನ ರಕ್ತ ಸುಲಭವಾಗಿ ಸಿಗುವುದಿಲ್ಲ. ಇನ್ನು ‘ಬಾಂಬೆ ಬ್ಲಡ್’ ಗುಂಪಿನ ರಕ್ತ ಅತೀ ವಿರಳವಾಗಿದ್ದು, ಇದರಲ್ಲಿಯೂ ಪಾಸಿಟಿವ್ ಮತ್ತು ನೆಗೆಟಿವ್ ಇರುತ್ತದೆ. ದೇಶದಲ್ಲಿ ಈ ಗುಂಪಿನ ರಕ್ತ ಹೊಂದಿರುವವರ ಸಂಖ್ಯೆ ಕೇವಲ 200ರಿಂದ 250 ಮಂದಿ ಇರಬಹುದು ಎಂದು ಅಂದಾಜಿಸಲಾಗಿದೆ.
ನಮ್ಮಲ್ಲಿ ಹೇಗೆ ಎ, ಬಿ, ಎಬಿ, ಒ ಪಾಸಿಟಿವ್ ಮತ್ತು ನೆಗೆಟಿವ್ ರಕ್ತದ ಗುಂಪುಗಳು ಇವೆಯೋ ಅದೇ ರೀತಿ ‘ಬಾಂಬೆ ಬ್ಲಡ್’ ಎಂಬ ಗುಂಪಿನ ರಕ್ತವೂ ಇದೆ. ಸುಮಾರು 20 ಸಾವಿರ ಜನರಲ್ಲಿ ಒಬ್ಬರು ಮಾತ್ರ ಈ ‘ಬಾಂಬೆ ಬ್ಲಡ್’ ಗುಂಪಿನ ರಕ್ತವನ್ನು ಹೊಂದಿರುತ್ತಾರೆ. ಪ್ರಸ್ತುತ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಇಡೀ ಭಾರತದಲ್ಲಿ ‘ಬಾಂಬೆ ಬ್ಲಡ್’ ಗುಂಪಿನ ರಕ್ತ ಹೊಂದಿರುವವರು ಸುಮಾರು 200 ರಿಂದ 250 ಮಂದಿ ಮಾತ್ರ. ಆದರೆ ರಕ್ತನಿಧಿಗಳಲ್ಲಿ ತಂತ್ರಜ್ಞಾನದ ಕೊರತೆ ಮತ್ತು ನಿರ್ಲಕ್ಷದಿಂದಾಗಿ ‘ಬಾಂಬೆ ಬ್ಲಡ್’ ಗುಂಪಿನ ರಕ್ತ ಹೊಂದಿರುವವರನ್ನು ಸರಿಯಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಗುಂಪಿನ ರಕ್ತದ ತೀವ್ರ ಕೊರತೆ ಉಂಟಾಗಿದ್ದು, ಇದು ರೋಗಿಗಳು ಮತ್ತು ವೈದ್ಯ ಲೋಕವನ್ನು ತೀವ್ರವಾಗಿ ಕಾಡುತ್ತಿದೆ.
ಏನಿದು ‘ಬಾಂಬೆ ಬ್ಲಡ್’?
‘ಬಾಂಬೆ ಬ್ಲಡ್’ ಇದು ಮುಂಬೈ ಪ್ರಾಂತ್ಯದ ಜನರಲ್ಲಿ ವಿಶೇಷವಾಗಿ ಕಂಡು ಬರುವ ಒಂದು ರಕ್ತದ ಮಾದರಿ. ಇದನ್ನು 1952ರಲ್ಲಿ ಮುಂಬೈನಲ್ಲಿ ತಜ್ಞ ವೈ.ಆರ್.ಬೇಂಡೆ ಎಂಬುವರು ಈ ಮಾದರಿಯ ರಕ್ತವನ್ನು ಪತ್ತೆ ಹಚ್ಚಿದ್ದರು. ಹೀಗಾಗಿ ಇದನ್ನು ‘ಬಾಂಬೆ ಬ್ಲಡ್’ ಗ್ರೂಪ್ ಎಂದು ಕರೆಯಲಾಗುತ್ತದೆ. ಇದರ ವಿಶೇಷತೆ ಎಂದರೆ ಇತರೆ ರಕ್ತದ ಗುಂಪುಗಳಲ್ಲಿ ಇರುವ ಎಚ್-ಆ್ಯಂಟಿಜನ್ ಅಂಶ ಈ ಗುಂಪಿನಲ್ಲಿ ಇರುವುದಿಲ್ಲ. ಯಾವುದೇ ಗುಂಪಿನ ರಕ್ತಕಣದಲ್ಲಿ ಎಚ್-ಆ್ಯಂಟಿಜನ್ ಒಳಗೊಂಡಂತೆ ‘ಎ’ ಗುಂಪಿನಲ್ಲಿ ಎ-ಆ್ಯಂಟಿಜನ್, ‘ಬಿ’ನಲ್ಲಿ ಬಿ-ಆ್ಯಂಟಿಜನ್, ‘ಎಬಿ’ನಲ್ಲಿ ಎಬಿ-ಆ್ಯಂಟಿಜನ್, ‘ಒ’ನಲ್ಲಿ ಎಚ್-ಆ್ಯಂಟಿಜನ್ ಎಂಬ ಅಂಶ ಇರುತ್ತದೆ. ಆದರೆ ಯಾವ ವ್ಯಕ್ತಿ ‘ಒ’ ಗುಂಪಿನ ರಕ್ತವನ್ನು ಹೊಂದಿದ್ದು ಅದರಲ್ಲಿ ಎಚ್-ಆ್ಯಂಟಿಜನ್ ಅಂಶ ಇಲ್ಲದಿದ್ದರೆ ಅದನ್ನು ‘ಬಾಂಬೆ ಬ್ಲಡ್’ ಎಂದು ಗುರುತಿಸಲಾಗುತ್ತದೆ.
ನಿರ್ಲಕ್ಷ್ಯದಿಂದ ರಕ್ತ ಕೊರತೆ
‘ಬಾಂಬೆ ಬ್ಲಡ್’ ರಕ್ತದ ಗುಂಪು ಪತ್ತೆಹಚ್ಚುವಲ್ಲಿ ಕೆಲ ರಕ್ತನಿಧಿಗಳು ನಿರ್ಲಕ್ಷ್ಯ ತೋರುತ್ತಿವೆ. ಇತರೆ ರಕ್ತದ ಗುಂಪುಗಳಂತೆಯೇ ‘ಒ’ ಗುಂಪಿನ ರಕ್ತವನ್ನು ಪರೀಕ್ಷೆ ಮಾಡಲಾಗುತ್ತಿದೆ. ಬದಲಿಗೆ ‘ಒ’ಗುಂಪಿನ ರಕ್ತವಿದ್ದಲ್ಲಿ ಎಚ್-ಆ್ಯಂಟಿಜನ್ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು. ಆಗ ‘ಬಾಂಬೆ ಬ್ಲಡ್’ ಎಂಬುದು ತಿಳಿಯುತ್ತದೆ. ಆದರೆ ಬಹುತೇಕ ರಕ್ತನಿಧಿಗಳಲ್ಲಿ ಈ ಪರೀಕ್ಷೆ ಮಾಡುತ್ತಿಲ್ಲ. ಇದರಿಂದಾಗಿ ‘ಎಚ್ ಆ್ಯಂಟಿಜನ್’ ಇಲ್ಲದ (ಬಾಂಬೆ ಬ್ಲಾಡ್) ಒ ಗುಂಪಿನ ರಕ್ತ ನೀಡಿದಾಗ ರೋಗಿಗೆ ತೊಂದರೆಯಾಗಿ ನಂತರದಲ್ಲಿ ಅದರ ‘ಎಚ್ ಆ್ಯಂಟಿಜನ್’ ಪರೀಕ್ಷೆ ನಡೆಸಿರುವುದೂ ಉಂಟು. ಆದ್ದರಿಂದ ‘ಬಾಂಬೆ ಬ್ಲಾಡ್’ ಕೊರತೆ ನೀಗಿಸಲು ಆ ಗುಂಪಿನ ರಕ್ತಹೊಂದಿರುವವರು ಅಗತ್ಯವಿದ್ದಾಗ ಮಾತ್ರವೇ ರಕ್ತದಾನ ಮಾಡಬೇಕು. ಇದಲ್ಲದೆ ‘ಒ’ ಗುಂಪಿನ ರಕ್ತ ಹೊಂದಿರುವವರು ಒಮ್ಮೆ ಎಚ್-ಆ್ಯಂಟಿಜನ್ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳುವುದು ಒಳಿತು ಎನ್ನುತ್ತಾರೆ ಸಂಕಲ್ಪ್ ಇಂಡಿಯಾ ಫೌಂಡೇಷನ್‌ನ ಸದಸ್ಯೆ ಪ್ರಭಾ.
ಬಾಂಬೆ ಬ್ಲಡ್ ಪೂರೈಸುವ ಸಂಕಲ್ಪ
ಅತಿ ವಿರಳವಾದ ‘ಬಾಂಬೆ ಬ್ಲಡ್’ ಗುಂಪಿನ ರಕ್ತದ ಕೊರತೆ ಹಿನ್ನೆಲೆಯಲ್ಲಿ ನಗರದ ಸಂಕಲ್ಪ್ ಇಂಡಿಯಾ ಫೌಂಡೇಷನ್ ಈ ಮಾದರಿಯ ರಕ್ತ ಹೊಂದಿರುವ ಅಪರೂಪದ ವ್ಯಕ್ತಿಗಳ ಮಾಹಿತಿ ಕಲೆ ಹಾಕಿ ಅವರನ್ನು ಒಂದೆಡೆ ಸೇರಿಸಲು ‘ಬಾಂಬೆ ಬ್ಲಡ್ ಕ್ಲಬ್’ ಹೆಲ್ಪ್‌ಲೈನ್ ಪ್ರಾರಂಭಿಸಿದೆ. ಜತೆಗೆ ‘ಬಾಂಬೆ ಬ್ಲಡ್’ ಗುಂಪಿನ ರಕ್ತದ ಬೇಡಿಕೆ ಅರಿತು ರೋಗಿಗಳಿಗೆ ದಾನಿಗಳ ಸಂಪರ್ಕ ಕಲ್ಪಿಸುವ ಸಂಕಲ್ಪದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.