UDUPI
ವೈದ್ಯರು ಸಿಬ್ಬಂದಿಗಳಿಗೆ ಕೊರೊನಾ..ಹೆಬ್ರಿ ಸಮುದಾಯ ಕೇಂದ್ರ ಸೀಲ್ ಡೌನ್

ಉಡುಪಿ ಜೂನ್ 28: ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಸಹಿತ 7 ಮಂದಿ ಸಿಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನಿನ್ನೆ ಆಸ್ಪತ್ರೆಯನ್ನು ಜಿಲ್ಲಾಡಳಿತ ಸಂಪೂರ್ಣ ಸೀಲ್ ಡೌನ್ ಮಾಡಿದೆ. ಹೆಬ್ರಿ ತಾಲೂಕಿನ ಪ್ರಮುಖ ಸರಕಾರಿ ಆಸ್ಪತ್ರೆ ಇದಾಗಿದ್ದು, ಇಲ್ಲಿ ದಿನನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಕಳೆದ 2 ದಿನಗಳಿಂದ ಪರಿಸರದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಲಸಿಕೆ ಹಾಗೂ ಆರೋಗ್ಯ ತಪಾಸಣೆಯನ್ನು ಇದೇ ಸಿಬಂದಿ ಮಾಡಿದ್ದು, ಸದ್ಯ ಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ.
ಇನ್ನು ಕೊರೊನಾ ಸೊಂಕಿತ ವೈದ್ಯರ ಹಾಗೂ ಸಿಬ್ಬಂದಿಗಳ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಹೆಬ್ರಿಯ ಸಮು ದಾಯ ಆರೋಗ್ಯ ಕೇಂದ್ರದಲ್ಲಿ ಐಸಿಟಿಸಿ ಕೌನ್ಸೆಲರ್ ಆಗಿರುವ 33ರ ಹರೆಯದ ಮಹಿಳೆ ಕೋವಿಡ್ ಬಾಧೆಗೊಳಗಾಗಿದ್ದಾರೆ. ಪಲಿಮಾರಿನ ಮನೆಯಿಂದ ದಿನಾಲೂ ಹೋಗಿ ಬರುತ್ತಿದ್ದ ಅವರನ್ನು ಇಂದು ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ವಾಸವಿದ್ದ ಪಲಿಮಾರು ದರ್ಕಾಸ್ತಿನ 3 ಮನೆಗಳು ಹಾಗೂ ನಾಡ್ಪಾಲು ಗ್ರಾಮದ ಎನ್.ಎಸ್. ರಸ್ತೆಯ ಮನೆಯೊಂದನ್ನು ಸೀಲ್‌ಡೌನ್ ಮಾಡಲಾಗಿದೆ.

ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಸಾಲಿಗ್ರಾಮ ಕಾರ್ಕಡದ ನಿವಾಸಿಗೆ ಸೋಂಕು ಬಾಧಿಸಿರುವ ಕಾರಣ ಅವರು ವಾಸವಿರುವ ಕಾರ್ಕಡದ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.