DAKSHINA KANNADA
ನಿಷೇಧವಿದ್ದರೂ ಬಿಸಿಲೆ ಘಾಟ್ ರಸ್ತೆಯಲ್ಲಿ ಲಾರಿ ವಾಹನಗಳು ಓಡಾಟ

ನಿಷೇಧವಿದ್ದರೂ ಬಿಸಿಲೆ ಘಾಟ್ ರಸ್ತೆಯಲ್ಲಿ ಲಾರಿ ವಾಹನಗಳು ಓಡಾಟ
ಪುತ್ತೂರು ನವೆಂಬರ್ 3: ಘನ ವಾಹನಗಳಿಗೆ ಸಂಪೂರ್ಣ ನಿಷೇಧವಿರುವ ಬಿಸಿಲೆ ಘಾಟ್ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದ ಲಾರಿಗಳು ಓಡಾಡಲಾರಂಭಿಸಿದ್ದು, ರಾತ್ರಿ ವೇಳೆಯಲ್ಲೇ ಹೆಚ್ಚಾಗಿ ಲಾರಿಗಳ ಓಡಾಟ ನಡೆಸುತ್ತಿದ್ದು, ಇಂದು ಬಿಸಿಲೆ ರಕ್ಷಿತಾರಣ್ಯದಲ್ಲಿರುವ ವನ್ಯಜೀವಿಗಳಿಗೆ ಕಂಟಕವಾಗಿದೆ.
ಬಿಸಿಲೆ ರಕ್ಷಿತಾರಣ್ಯವಾಗಿದ್ದು ಇಲ್ಲಿ ಸಾರ್ವಜನಿಕ ವಾಹನಗಳು ಬಿಟ್ಟು ಯಾವುದೇ ರೀತಿಯ ಘನ ವಾಹನಗಳು ಸಂಚರಿಸಬಾರದು ಎಂಬ ಆದೇಶವಿದೆ. ಆದರೆ ಶಿರಾಢಿಯಲ್ಲಿ ಘನವಾಹನಗಳ ನಿಷೇಧವಿರುವ ಹಿನ್ನಲೆಯಲ್ಲಿ ರಾತ್ರಿಯ ವೇಳೆ ಲಾರಿಗಳು ಬಿಸಿಲೆ ರಕ್ಷಿತಾರಣ್ಯದ ಮಾರ್ಗದಲ್ಲಿ ಸಂಚರಿಸುತ್ತಿವೆ.

ದಟ್ಟ ಕಾಡಿನ ರಸ್ತೆಯಲ್ಲಿ ಬೇಕಾಬಿಟ್ಟಿ ಸಂಚರಿಸುತ್ತಿರುವ ಭಾರೀ ಗಾತ್ರದ ವಾಹನಗಳು ಇದೀಗ ಬಿಸಿಲೆ ರಸ್ತೆಯು ಕುಸಿದು ಬೀಳಲೂ ಕಾರಣವಾಗುತ್ತಿದೆ. ಕಳೆದ ಅಗಸ್ಟ್ ತಿಂಗಳಿನಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬಿಸಿಲೆ ಘಾಟ್ ನ ಹಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿ ಹಲವೆಡೆ ರಸ್ತೆಗಳು ಈಗಾಗಲೇ ಕುಸಿದಿವೆ.
ಶಿರಾಢಿ ಘಾಟ್ ರಸ್ತೆ ಬಂದ್ ಹಿನ್ನಲೆಯಲ್ಲಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚರಿಸಬೇಕಾದ ಲಾರಿಗಳು ಇತ್ತೀಚಿನ ದಿನಗಳಲ್ಲಿ ಅಪಾಯಕಾರಿಯಾಗಿರುವ ಬಿಸಿಲೆ ಘಾಟ್ ರಸ್ತೆಯ ಮೂಲಕ ತೆರಳುತ್ತಿದೆ.
ಬಿಸಿಲೆ ಕಾಡುಗಳಲ್ಲಿ ಹೆಚ್ಷಿನ ಸಂಖ್ಯೆಯ ಕಾಡುಪ್ರಾಣಿಗಳಿದ್ದು, ಅದರಲ್ಲೂ ಆನೆಗಳು ಪ್ರತಿನಿತ್ಯ ರಸ್ತೆಯನ್ನು ದಾಟುವ ಪ್ರದೇಶ ಇದಾಗಿದ್ದು, ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.