BANTWAL
ದಕ್ಷಿಣ ಕನ್ನಡ ಉಡುಪಿಯಲ್ಲಿಗುಡುಗಿನ ಅಬ್ಬರದ ಮಳೆಗೆ ಜನ ತಲ್ಲಣ, ಹೆಬ್ರಿಯಲ್ಲಿ ಕೊಚ್ಚಿ ಹೋದ ವೃದ್ದೆ..!!
ಮಂಗಳೂರು, ಉಡುಪಿ : ದ.ಕ. ಉಡುಪಿ ಸೇರಿದಂತೆ ಕರಾವಳಿಯಲ್ಲಿ ರವಿವಾರ ಸುರಿದ ಗುಡುಗು ಸಿಡಿಲಿನ ಮಳೆಗೆ ಇಳೆ ತಲ್ಲಣಗೊಂಡರೆ ದಸರಾ ರಜೆ ಸವಿಯುತ್ತಿದ್ದ ಜನ ಸಿಡಿಲು ಗುಡುಗಿನ ಮಳೆ ಆರ್ಭಟಕ್ಕೆ ಅಕ್ಷರಶ ತತ್ತರಿಸಿದ್ದರು.
ಉಡುಪಿ ಮುದ್ರಾಡಿ ಬಲ್ಲಾಡಿ ಗ್ರಾಮದ ಚಂದ್ರು ಗೌಡ್ತಿ (90) ಎಂಬವರು ರವಿವಾರ ಮಳೆಯಿಂದ ನೀರು ಏರಿಕೆಯಾಗಿ ಮನೆಯಿಂದ ಹೊರ ಬಂದಾಗ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಜೆ ಹೊತ್ತಿಗೆ ಭಾರೀ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ಮಳೆ ಸುರಿದಿದೆ. ಮಂಗಳೂರು ನಗರದಲ್ಲಿ ಸಿಡಿಲಿನ ಅಬ್ಬರ ಜೋರಾಗಿತ್ತು. ರವಿವಾರ ದಿನವಿಡೀ ಮೋಡ ಕವಿದ ವಾತಾವರಣವಿದ್ದು ಸಂಜೆ ಹೊತ್ತಿಗೆ ಧಾರಾಕಾರ ಮಳೆ ಸುರಿದಿದೆ. ಬಂಟ್ವಾಳ ತಾಲೂಕಿನ ಅಳಿಕೆಯ ಎರುಂಬುವಿನಲ್ಲಿ ಕೊರಗ ಮೂಲ್ಯ ಎಂಬವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿಯಾಗಿದೆ. ಕೆಲವು ಕಡೆಗಳಲ್ಲಿ ಗಾಳಿಯೊಂದಿಗೆ ಮಳೆಯಾಗಿರುವುದು ವರದಿಯಾಗಿದೆ.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮಾರುತಿನಗರ ಎಂಬಲ್ಲಿ ಮನೆಯೊಂದಕ್ಕೆ ತೆಂಗಿನ ಮರ ಬಿದ್ದಿದೆ. ಮಾರುತಿನಗರ ಆಶಾ ಎಂಬವರ ಹೆಂಚಿನ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಗೆ ತೀವ್ರ ಹಾನಿಯಾಗಿದೆ. ಆದರೆ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಕರಾವಳಿಯಲ್ಲಿ ಇನ್ನೂ 2 ರಿಂದ ಮೂರು ದಿನಗಳ ಕಾಲ ಮಳೆ ಮುಂದುವರಿಯಬಹುದೆಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.