BANTWAL
ಜಿಲ್ಲಾಧಿಕಾರಿ ಬಂದರೂ ಆಗದ ಪ್ರಯೋಜನ – ಕಲ್ಲಡ್ಕದಲ್ಲಿ ರಸ್ತೆ ಮೇಲೆ ಮಳೆ ನೀರು
ಬಂಟ್ವಾಳ ಜೂನ್ 23: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಜೊರಾಗಿದ್ದು, ಈಗಾಗಲೇ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.ಈ ನಡುವೆ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಬಂಟ್ವಾಳದ ಕಲ್ಲಡ್ಕದಲ್ಲಿ ಅವಾಂತರ ಸೃಷ್ಠಿಸಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಳೆ ನಿರಂತರವಾಗಿ ಸುರಿಯುತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಈ ನಡುವೆ ಮಾಮೂಲಿಯಾಗಿ ಕಲ್ಲಡ್ಕದಲ್ಲಿ ಮಳೆ ಅವಾಂತರವನ್ನೇ ಸೃಷ್ಠಿಸಿದ್ದು, ರಸ್ತೆ ಮೇಲೆ ಮಳೆ ನೀರು ಹರಿದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಪ್ರದೇಶ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.ರಸ್ತೆಯಲ್ಲಿ ನೀರು ತುಂಬಿ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಇತ್ತೀಚೆಗೆ ಕಲ್ಲಡ್ಕ ರಸ್ತೆ ಸಮಸ್ಯೆ ಕುರಿತಂತೆ ಸ್ವತಃ ಜಿಲ್ಲಾಧಿಕಾರಿ ಬಂದು ಪರಿಶೀಲನೆ ಮಾಡಿ ಅಗತ್ಯ ಕ್ರಮಕ್ಕೆ ಸೂಚಿಸಿದ್ದರು, ಆದರೆ ಜಿಲ್ಲಾಧಿಕಾರಿ ಭೇಟಿಯೂ ಕೂಡ ಯಾವುದೇ ಪ್ರಯೋಜನವಾದಂತೆ ಕಾಣಿಸುತ್ತಿಲ್ಲ. ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಗೆ ಜನ ಹೈರಾಣಾಗಿದ್ದು, ಇನ್ನೂ ಮಳೆಗಾಲದಲ್ಲೇ ಪ್ರಾರಂಭದಲ್ಲೇ ಈ ಸ್ಥಿತಿ ಬಂದಿದ್ದು, ಮುಂದೆ ಸ್ಥಿತಿ ಏನು ಎಂತ ಚಿಂತಾಕ್ರಾಂತರಾಗಿದ್ದಾರೆ.