LATEST NEWS
ಕರಾವಳಿಯಲ್ಲಿ ಜೂನ್ 23 ಮತ್ತು 24 ರಂದು ಭಾರೀ ಮಳೆ ಸಾಧ್ಯತೆ
ಮಂಗಳೂರು ಜೂನ್ 20: ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜಬನ್ 23 ಮತ್ತು 24 ರಂದು ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ಇನ್ನು 5 ದಿನಗಳ ಇದೇ ರೀತಿ ಮುಂದುವರಿಯಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಕೇಂದ್ರ ಸರ್ಕಾರದ ಹವಾಮಾನ ಇಲಾಖೆ ಪ್ರಕಾರ ಈ 5 ದಿನಗಳ ಕಾಲ ಸರಾಸರಿ 65 ಮಿ.ಮೀ.ಗಿಂತ ಹೆಚ್ಚು ಮಳೆಯಾಗುತ್ತದೆ ಎಂದೂ ಹೇಳಿದೆ.
ಈ ನಡುವೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಉಚ್ಚಿಲ-ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಸೋಮೇಶ್ವರ ಮತ್ತು ಉಚ್ಚಿಲ ಭಾಗದಲ್ಲಿರುವ ಎರಡು ಮನೆಗಳು ತೀವ್ರ ಅಪಾಯದಂಚಿಗೆ ತಲುಪಿದೆ.
ಉಚ್ಚಿಲ ಮೂರು ಮಾರ್ಗದ ಬಳಿ ರಸ್ತೆಗೆ ಅಪ್ಪಳಿಸುತ್ತಿರುವ ಅಲೆಗಳನ್ನು ತಡೆಯಲು ಶುಕ್ರವಾರ ಬೆಳಗ್ಗಿನಿಂದ ಸಂಜೆಯವರೆಗೆ ಸ್ಥಳೀಯರು ಗೋಣಿ ಚೀಲದೊಳಗೆ ಮರಳು ತುಂಬಿಸಿ, ಸಮುದ್ರಕ್ಕೆ ಅಡ್ಡವಾಗಿ ಇಟ್ಟಿದ್ದಾರೆ. ಬ್ರೇಕ್ ವಾಟರ್ ಕಾಮಗಾರಿ ಅರ್ಧದಲ್ಲೇ ನಿಂತಿರುವುದರಿಂದ ಹಾಗೂ ಕಲ್ಲುಗಳನ್ನು ಸಮರ್ಪಕವಾಗಿ ಹಾಕದ ಕಾರಣ ಉಚ್ಚಿಲ, ಸೋಮೇಶ್ವರ ನಿವಾಸಿಗಳು ಅಪಾಯದಂಚಿಗೆ ತಲುಪುವಂತಾಗಿದೆ.