LATEST NEWS
ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮುಂಗಾರು ಮಳೆ

ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮುಂಗಾರು ಮಳೆ
ಮಂಗಳೂರು ಜೂನ್ 13: ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ ಉಡುಪಿಯಲ್ಲಿ ನಿನ್ನೆಯಿಂದ ಭಾರಿ ಮಳೆ ಸುರಿಯುತ್ತಿದ್ದು, ಇಂದು ಕೂಡ ಭಾರಿ ಮಳೆ ಮುಂದುವರೆದಿದೆ.
ಕರಾವಳಿ ಜಿಲ್ಲೆಗಳಲ್ಲಿ ಮುಂಗಾರುಮಳೆ ಜೋರಾಗಿಯೇ ಆರಂಭವಾಗಿದೆ. ವಾಯು ಚಂಡಮಾರುತದ ನಡುವೆ ಜಿಲ್ಲೆಯಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಸುರಿದ ಮಳೆಗೆ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಅಂಗಡಿಗಳಿಗೆ ನೀರು ನುಗ್ಗಿದೆ. ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿರದ ಹಿನ್ನಲೆಯಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು , ಪಾದಚಾರಿಗಳು ನಡೆದಾಡಲ ಹರಸಾಹಸಪಡುತ್ತಿದ್ದರು.
ವಾಯು ಚಂಡಮಾರುತಕ್ಕೆ ಸಮುದ್ರ ಪ್ರಕ್ಷುಬ್ಧವಾಗಿದ್ದು, ಕಡಲ್ಕೊರೆತ ತೀವ್ರವಾಗಿದೆ. ಉಳ್ಳಾಲದಲ್ಲಿ ಕೈಕೋ, ಕಿಲೇರಿಯಾ ನಗರದಲ್ಲಿ ನಾಲ್ಕು ಮನೆಗಳು ಕೊಚ್ಚಿಕೊಂಡು ಹೋಗಿದ್ದು, ಇನ್ನೂ ನಾಲ್ಕು ಮನೆಗಳಿಗೆ ಹಾನಿಯಾಗಿದೆ.
ಉಚ್ಚಿಲದಲ್ಲಿ ಒಂದು ಮನೆಗೆ ಹಾನಿಯಾಗಿದೆ. ಎಂಟು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಮಳೆಯ ಜೊತೆಯಲ್ಲೇ ಚಂಡಮಾರುತದಿಂದ ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಿದ್ದು, ಬೃಹದಾಕಾರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ.
ಸಸಿಹಿತ್ಲು ಬೀಚ್‌ನಲ್ಲಿ ಅಂಗಡಿ ಮಳಿಗೆಯೊಂದು ಕೊಚ್ಚಿಕೊಂಡು ಸಮುದ್ರ ಸೇರುವ ಸ್ಥಿತಿಯಲ್ಲಿದೆ. ಉಡುಪಿಯ ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕೆರೆ ಬಳಿ ಸಮುದ್ರ ಅಲೆಗಳು ಉಕ್ಕಿ ತೀರದ ಮನೆಗಳಿಗೆ ನುಗ್ಗಿದೆ. ಈ ಭಾಗದಲ್ಲಿ ಕಡಲ್ಕೊರೆತದ ಭೀತಿ ಎದುರಾಗಿದೆ.
ಉಡುಪಿ ಜಿಲ್ಲೆಯಲ್ಲೂ ಎಡಬಿಡದೆ ಮಳೆ ಸುರಿಯತ್ತಿದೆ. ಬೈಂದೂರು, ಕುಂದಾಪುರದಲ್ಲಿ ಗಾಳಿ ಸಹಿತ ರಾತ್ರಿ ಸುರಿದ ಮಳೆ ತಂಪೆರೆದಿದೆ.ಭಾರೀ ಮಳೆಯ ನಡುವೆಯೂ ರಾತ್ರಿ ಉಡುಪಿ ಕೃಷ್ಣನ ಉತ್ಸವ ನಡೆದಿದೆ.