LATEST NEWS
ಉಡುಪಿ ಜಿಲ್ಲೆಯಲ್ಲಿ ಮುಂಜಾನೆಯಿಂದ ಧಾರಾಕಾರ ಮಳೆ

ಉಡುಪಿ ಜಿಲ್ಲೆಯಲ್ಲಿ ಮುಂಜಾನೆಯಿಂದ ಧಾರಾಕಾರ ಮಳೆ
ಉಡುಪಿ ಜೂನ್ 22: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇಂದು ಮುಂಜಾನೆಯಿಂದಲೇ ಎಡಬಿಡದೆ ಮಳೆ ಸುರಿಯಲಾರಂಭಿಸಿದೆ.
ಮುಂಗಾರುಮಳೆ ಪ್ರವೇಶ ವಿಳಂಬದಿಂದಾಗಿ ಸರಿಯಾಗಿ ಮಳೆ ಕಾಣದೇ ಉಳಿದಿದ್ದ ಉಡುಪಿ ಜಿಲ್ಲೆಯಲ್ಲಿ ಇಂದು ಮುಂಜಾನೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಾತ್ರ ಮಳೆಯಾಗುತ್ತಿತ್ತು. ಅಲ್ಲದೆ ರಾತ್ರಿ ಸಮಯದಲ್ಲಿ ಮಾತ್ರ ಮಳೆಯಾಗುತ್ತಿತ್ತು. ಆದರೆ ಇಂದು ಮುಂಜಾನೆಯಿಂದಲೇ ಪ್ರಾರಂಭವಾದ ಮಳೆ ಇನ್ನು ಸುರಿಯುತ್ತಿದೆ.

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಅತೀ ಹೆಚ್ಚು ಮಳೆ ಬಿದ್ದಿದೆ. ಕಳೆದ 24 ಗಂಟೆಯಲ್ಲಿ ಸುಮಾರು 45 ಮಿಲಿಮೀಟರ್ ಮಳೆ ಕುಂದಾಪುರದಲ್ಲೇ ಆಗಿದೆ. ಉಡುಪಿ ಮತ್ತು ಕಾರ್ಕಳ ಜಿಲ್ಲೆಯಲ್ಲಿ ಸರಾಸರಿ 25 ಮಿಲಿ ಮೀಟರ್ ಮಳೆ ಬಿದ್ದಿದೆ. ಬೈಂದೂರು- ಹೆಬ್ರಿ- ಕಾಪುನಲ್ಲೂ ಸಾಧಾರಣ ಮಳೆಯಾಗಿದೆ.
ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದೆ. ಹವಾಮಾನ ಇಲಾಖೆಯ ಪ್ರಕಾರ ಜೂನ್ 22ರ ನಂತರ ಭಾರೀ ಮಳೆ ಬೀಳುತ್ತದೆ ಎಂದು ಮುನ್ಸೂಚನೆ ಇದೆ. ವಾತಾವರಣ ಈ ಸೂಚನೆಗೆ ಪೂರಕವಾಗಿದೆ. ಮಳೆಯಾದ್ರೆ ಕಡಲು ಪ್ರಕ್ಷುಬ್ಧವಾಗುವ ಸಾಧ್ಯತೆಯಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.