LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಬ್ಬರಿಸುತ್ತಿರುವ ಗಾಳಿ ಮಳೆ

ಮಂಗಳೂರು ಜುಲೈ 16: ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು, ಮಳೆ ಜೊತೆಗೆ ಗಾಳಿಯೂ ಬೀಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮೂರು ದಿನಗಳಿಂದ ಬಿರುಸುಗೊಂಡಿರುವ ಮಳೆ ಮುಂದುವರಿದಿದ್ದು, ಮಂಗಳವಾರವೂ ಮುಂದುವರೆದಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬಾರೀ ಮಳೆ ಪ್ರಾರಂಭವಾಗಿತ್ತು ಭಾರಿ ಮಳೆಯ ಮುನ್ಸೂಚನೆ ಇದ್ದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 17 ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಅಲ್ಲದೆ ಶಾಲೆ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಸಾರಲಾಗಿತ್ತು.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ ಉಕ್ಕಿ ಹರಿದು ಸ್ನಾನಘಟ್ಟ ಮುಳುಗಡೆಯಾಗಿತ್ತು. ನದಿಯಲ್ಲಿ ತೀರ್ಥಸ್ನಾನ ಮಾಡದಂತೆ ಯಾತ್ರಿಗಳನ್ನು ನಿರ್ಬಂಧಿಸಲಾಯಿತು. ತೀರ್ಥಸ್ನಾನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು. ರಾಜ್ಯದ ಕರಾವಳಿಯಲ್ಲಿ ಇನ್ನೂ ಐದು ದಿನಗಳು ಗುಡುಗಿನಿಂದ ಕೂಡಿದ ಭಾರಿ ಗಾಳಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಇದೇ 16, 17 ಮತ್ತು 18 ರಂದು ರೆಡ್ ಅಲರ್ಟ್ ಮತ್ತು 19 ಮತ್ತು 20ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.