LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಅಬ್ಬರಿಸುತ್ತಿರುವ ಗಾಳಿ ಮಳೆ
ಮಂಗಳೂರು ಜುಲೈ 30: ಎರಡು ಮೂರು ದಿನಗಳ ಬಿಡುವಿನ ಬಳಿಕ ಮತ್ತೆ ಮಳೆ ಅಬ್ಬರ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಈಗಾಗಲೇ ನಿನ್ನೆಯಿಂದ ಸುರಿಯುತ್ತಿರುವ ಗಾಳಿ ಮಳೆಗೆ ಹಲವೆಡೆ ಹಾನಿಯಾಗಿದೆ. ನೇತ್ರಾವತಿ ನೀರಿನ ಮಟ್ಟ ಏರಿಕೆಯಾಗಿದ್ದು ಅಪಾಯಮಟ್ಟದಲ್ಲಿ ಹರಿಯುತ್ತಿದ್ದಾಳೆ. ಕೆಲವು ಕಡೆಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ.
ದಕ್ಷಿಣಕನ್ನಡದಲ್ಲಿ ಮತ್ತೆ ಮಳೆ ಆರಂಭವಾಗಿದೆ. ಎರಡು ಮೂರು ದಿನ ರೆಸ್ಟ್ ತಗೆದುಕೊಂಡಿದ್ದ ಮಳೆ ನಿನ್ನೆ ಸಂಜೆಯಿಂದ ಮತ್ತೆ ಪ್ರಾರಂಭವಾಗಿದೆ. ಈಗಾಗಲೇ ಘಟ ಪ್ರದೇಶದಲ್ಲಿ ವ್ಯಾಪಕ ಮಳೆಯ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಬಂಟ್ವಾಳದಲ್ಲಿ ಬೆಳಗ್ಗೆ ನೀರಿನ ಮಟ್ಟ 7.9 ಮೀ. ಗೆ ತಲುಪಿದೆ. ಈಗಾಗಲೇ ಕೆಲವೊಂದು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನೀರಿನ ಮಟ್ಟ ಇನ್ನೂ ಹೆಚ್ಚಾದರೆ ಪ್ರವಾಹದ ಅಪಾಯದ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ನದಿಯ ದಡಗಳಲ್ಲಿರುವ ಗ್ರಾಮಾಂತರ ಪ್ರದೇಶದ ಶಾಲೆಗಳಾದ ಬಾಳ್ತಿಲ್ಲ, ಪೆರ್ನೇ ಕಡೆ ಇನ್ನೂ ನೀರಿನ ಅಪಾಯಕಾರಿ ಮಟ್ಟದಿಂದ ಅಪಾಯವುಳ್ಳ ಶಾಲೆಗಳ ಸಿಆರ್ ಪಿ ಮತ್ತು ಎಸ್‌ಟಿಎಂಸಿ ಸಮಿತಿಗಳಿಗೆ ತಮ್ಮ ಹಂತದಲ್ಲೇ ರಜೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ಹೇಳಿದ್ದಾರೆ.
ಬೆಳ್ತಂಗಡಿಯಲ್ಲೂ ಕಳೆದ ರಾತ್ರಿಯಿಂದ ನಿರಂತರ ಮಳೆಯಾಗುತ್ತಿರುವ ಪರಿಣಾಮ ನೇತ್ರಾವತಿ, ಮೃತ್ಯುಂಜಯ ನದಿಗಳು ಉಕ್ಕಿ ಹರಿಯುತ್ತಿದ್ದು, ಚಾರ್ಮಾಡಿ ಘಾಟ್ ನಲ್ಲಿ ರಸ್ತೆಗೆ ಮರ ಉರುಳಿದ್ದರಿಂದ ಸಂಚಾರಕ್ಕೆ ತಡೆಯಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗುತ್ತಿದ್ದು, ನದಿ ಸಮೀಪದ ತೋಟಗಳಿಗೆ ನೀರು ನುಗ್ಗಿದೆ. ತೀರ ಗ್ರಾಮಾಂತರ ಸರಕಾರಿ ಶಾಲೆಗಳಲ್ಲಿ ಸ್ವಯಂಪ್ರೇರಿತವಾಗಿ ರಜೆ ನೀಡಲಾಗಿದೆ. ಅಪಾಯದ ಮಟ್ಟ ಮೀರಿ ನದಿ ನೀರು ಹೆಚ್ಚಳವಾಗುತ್ತಿರುವುದರಿಂದ ನೆರೆ ಸಂಭವ ಸಾಧ್ಯತೆ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇಂದು(ಮಂಗಳವಾರ) ರಜೆ ನೀಡಲಾಗಿದೆ.