LATEST NEWS
ಕರಾವಳಿಯಾದ್ಯಂತ ಎಡಬಿಡದೇ ಸುರಿಯುತ್ತಿರುವ ಮಳೆ..ಮಳುಗುವ ಭೀತಿಯಲ್ಲಿ ತಗ್ಗು ಪ್ರದೇಶಗಳು
ಮಂಗಳೂರು ಜುಲೈ 3: ಕರಾವಳಿಯಾದ್ಯಂತ ಗುರುವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕಳೆದ ಎರಡು ದಿನಗಳಿಂದ ಮಳೆಯ ರಭಸ ಹೆಚ್ಚಾಗುತ್ತಿದೆ.
ಘಟ್ಟ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಹಾಗು ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮಳೆಯಿಂದಾಗಿ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಮುಳುಗಡೆಯಾಗುವ ಭೀತಿಯೂ ಎದುರಾಗಿದೆ.
ಕಳೆದ ಬಾರಿಯ ಮಳೆಯು ದಕ್ಷಿಣಕನ್ನಡ ಜಿಲ್ಲೆಯನ್ನು ಅಲ್ಲೋಲ ಕಲ್ಲೋಲ ಮಾಡಿದ್ದು, ಈ ಬಾರಿಯ ಮಳೆಯ ಲಕ್ಷಣವೂ ಕಳೆದ ವರ್ಷದ ಮಳೆಯಂತೆಯೇ ಇರುವ ಹಿನ್ನಲೆಯಲ್ಲಿ ಘಟ್ಟದ ಪ್ರದೇಶದ ಅಂಚಿನಲ್ಲಿರುವ ಜನರಲ್ಲಿ ಆತಂಕವೂ ಮನೆಮಾಡಲಾರಂಭಿಸಿದೆ. ಜುಲೈ 5 ರ ವರೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮಳೆಯ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಕಾರ್ಮೋಡ ಕವಿದ ವಾತಾವರಣವಿದೆ.
ಉಡುಪಿ ಜಿಲ್ಲೆಯಲ್ಲೂ ಭಾರಿ ಮಳೆ ಸುರಿಯುತ್ತಿದೆ. ಇಂದು ಸುರಿದ ಭಾರಿ ಮಳೆಗೆ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ರುದ್ರು ಕೊಟ್ಟಾರಿ ಎಂಬವರ ಮನೆ ಭಾಗಶಃ ಹಾನಿಯಾಗಿದ್ದು, ಸುಮಾರು 40 ಸಾವಿರ ರೂಪಾಯಿ ನಷ್ಟ ಅಂದಾಜಿಸಲಾಗಿದೆ.
https://youtu.be/yNOrMvmsKXg