UDUPI
ಆರೋಗ್ಯವಂತ ರೈತರಿಂದ ಆರೋಗ್ಯವಂತ ದೇಶ
ಆರೋಗ್ಯವಂತ ರೈತರಿಂದ ಆರೋಗ್ಯವಂತ ದೇಶ
ಉಡುಪಿ ಜನವರಿ 29: ಸದೃಢ ಸಮಾಜಕ್ಕೆ ಅಗತ್ಯವಾದ ಆಹಾರ ಉತ್ಪಾದನೆಯ ಹೊಣೆ ರೈತರದ್ದು. ಸದನದಲ್ಲಿ ರೈತರ ಬಗ್ಗೆ ಚರ್ಚೆ ನಡೆಯುವಾಗ ರೈತರ ಬೆಳೆಗೆ ಬೆಲೆ ನಿಗದಿ, ನೀರಾವರಿ, ಮಾರುಕಟ್ಟೆ ಮುಂತಾದ ವಿಷಯಗಳ ಬಗ್ಗೆ ಸಮಗ್ರ ಚರ್ಚೆ ನಡೆಯುತ್ತದೆ; ಆದರೆ ರೈತರ ಆರೋಗ್ಯದ ಬಗ್ಗೆ ಇದುವರೆಗೆ ಚರ್ಚೆಗಳಾಗಲಿಲ್ಲ. ಕೃಷಿ ಬೆಲೆ ಆಯೋಗ ಹಾಗೂ ಮಾಹೆ ಮೂಲಕ ಈ ನಿಟ್ಟಿನ ಚಿಂತನೆ ಮೂಡಿರುವುದು ಶ್ಲಾಘನಾರ್ಹ ಎಂದು ಮೀನುಗಾರಿಕೆ, ಯುವಸಬಲೀಕರಣ, ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಹೇಳಿದರು.
ಅವರು ಇಂದು ಮಣಿಪಾಲ ಕೆ.ಎಮ್.ಸಿಯ ಡಾ.ಟಿ.ಎಮ್.ಎ.ಪೈ ಸಭಾಂಗಣದಲ್ಲಿ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ‘ರಾಜ್ಯದ ರೈತರ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರ‘ವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ 130 ಕೋಟಿ ಜನರಿಗೆ ಆಹಾರ ಒದಗಿಸುವ ಜವಾಬ್ದಾರಿ ರೈತರ ಮೇಲಿದೆ. ರೈತರು ಕೃಷಿಕರು ಇರದೆ ಹೋದರೆ ಮುಂದೊಂದು ದಿನ ಆಹಾರಕ್ಕಾಗಿ ಪರಿತಪಿಸುವಂತಾಗುತ್ತದೆ. ಆಹಾರಕ್ಕಾಗಿ ಕೃಷಿಕ ಎಷ್ಟು ಮುಖ್ಯವೋ ಅಷ್ಟೇ ಆತನ ಆರೋಗ್ಯ ಕೂಡ ಮುಖ್ಯ. ಆತನ ಆರೋಗ್ಯ ಉತ್ತಮವಾಗಿದ್ದರೆ ಆತ ಉತ್ತಮ ಕೃಷಿಯನ್ನು ಮಾಡಬಲ್ಲ. ಇಂದು ಶೇ.51 ರಷ್ಟು ರೈತರ ದೇಹದೊಳಗೆ ಕೀಟನಾಶಕ ಹೊಕ್ಕಿ, ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಣ್ಣಿನ ಆರೋಗ್ಯ ಪರೀಕ್ಷೆ ಮಾಡುವಂತೆ ರೈತರ ಆರೋಗ್ಯ ಕೂಡ ಪರೀಕ್ಷೆ ನಡೆಸುವ ಅಗತ್ಯ ಇಡೀ ದೇಶಕ್ಕಿದೆ ಎಂದರು. ಮುಂಜಾಗೃತ ಕ್ರಮವಿಲ್ಲದೆ ರೈತರು ಕೃಷಿಗೆ ಕೀಟನಾಶಕ ಸಿಂಪಡಿಸುವುದರಿಂದ ಕೀಟನಾಶವಾಗುವುದರೊಂದಿಗೆ ರೈತರ ಮತ್ತು ಜನರ ಆರೋಗ್ಯ ನಾಶವಾಗುತ್ತಿದೆ. ಕೀಟನಾಶಕ ಕೃಷಿಯನ್ನು ನಿಲ್ಲಿಸಿ ಸಾವಯವಯವ ಕೃಷಿಯನ್ನು ಅವಲಂಬಿಸುವುದು ಉತ್ತಮ ಎಂದು ಅವರು ಸಭೆಯಲ್ಲಿ ಸಲಹೆ ಮಾಡಿದರು.
ರಾಜ್ಯದ ಆಯ್ದ ಜಿಲ್ಲೆಗಳ ಎಂಟು ಹಳ್ಳಿಗಳಲ್ಲಿ ಮಾಹೆಯ ವೈದ್ಯರ ತಂಡ ನಡೆಸಿದ ಸಮೀಕ್ಷೆಯಿಂದ ರೈತರಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಹಿಮೋಗ್ಲೋಬಿನ್ ಕೊರತೆ ವರದಿಯಾಗಿದೆ. ವರದಿಯ ವಿವರವನ್ನು ಡಾ ಶಂಕರ್ ಸಭೆಗೆ ನೀಡಿದರು. 743 ರೈತರ ಪೈಕಿ 216 ರೈತರಲ್ಲಿ ರಕ್ತದೊತ್ತಡ, ಪ್ರತಿಶತ 35 ರಷ್ಟು ಜನರಲ್ಲಿ ಸಕ್ಕರೆ ಕಾಯಿಲೆ , ಹಾಗೂ ಶೇ 51 ರೈತರಲ್ಲಿ ಕೀಟನಾಶಕ ಅಂಶ ದೇಹದ ಒಳಗೆ ಹೋಗಿರುವುದು ಪತ್ತೆ ಹಚ್ಚಲಾಗಿದೆ. ಈಗಾಗಲೇ ಇದಕ್ಕೆ ಜೌಷಧವನ್ನು ತೆಗೆದುಕೊಳ್ಳುತ್ತಿದ್ದು, ಅದಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದರು.