Connect with us

    LATEST NEWS

    ಸಂಘನಿಕೇತನದಲ್ಲಿ ಮಾತಾ ಅಮೃತಾನಂದಮಯಿ ದೇವಿಯವರ ಜನ್ಮದಿನಾಚರಣೆ

    ಮಂಗಳೂರು : ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ 71 ನೆಯ ಜನ್ಮದಿನವನ್ನು ನಗರದ ಸಂಘನಿಕೇತನದಲ್ಲಿ ಭಾನುವಾರ ಶ್ರದ್ಧಾ ಭಕ್ತಿಗಳಿಂದ ಹಾಗೂ ಸಾಮಾಜಿಕ ಸೇವಾ ಯೋಜನೆಗಳ ವಿತರಣೆಯೊಂದಿಗೆ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

    ಮಾತಾ ಅಮೃತಾನಂದಮಯಿ ಮಠದ ಕರಾವಳಿ ಕರ್ನಾಟಕದ ವಿವಿಧ ಸೇವಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಮಠದ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರು ಶ್ರೀಗುರು ಪಾದುಕಾಪೂಜೆ ಮಾಡುವ ಮೂಲಕ ಚಾಲನೆ ಪಡೆಯಿತು. ಈ ಸಂದರ್ಭದಲ್ಲಿ ಆಶೀರ್ವಚನವಿತ್ತು ಮಾತೃತ್ವದ ಮಹತ್ವದ ಅಂಶಗಳನ್ನು ಉಲ್ಲೇಖಿಸಿದರು. ಅಮ್ಮನ ಗರ್ಭದಲ್ಲಿ ಮಗು ಇರುವಾಗ ಮಗುವಿಗೆ ಬೇಕಾದ ಪೋಷಕಾಂಶಗಳು ಆ ತಾಯಿಯಿದಲೇ ಲಭಿಸುತ್ತದೆ. ಶರೀರ ಮತ್ತು ಮನಸ್ಸುಗಳ ಸೃಷ್ಟಿ ಅಲ್ಲಿಂದಲೇ ಆಗುತ್ತದೆ. ಅದೇ ರೀತಿಯಲ್ಲಿ ನಾವು ವಿಶ್ವ ಮಾತೆಯ ಆಶ್ರಯದಲ್ಲಿ ಇದ್ದೇವೆ. ಮಗು ತಾಯಿಯ ಪ್ರೇಮವನ್ನು ಅನುಭವಿಸುತ್ತದೆ. ಗರ್ಭದಿಂದ ಹೊರಬಂದ ಮೇಲೆ ತಾಯಿ ಮಗುವಿನ ಮುಖಾಮುಖಿ ಆಗುತ್ತದೆ. ಅಮ್ಮನ ಕರುಣೆ, ಭಕ್ತಿಭಾವ ನಮ್ಮಲ್ಲಿ ಸದಾ ಇರಲಿ ಎಂದರು.

    ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕಿಶೋರ್ ಆಳ್ವ ಮಾತನಾಡಿ ವಿಶ್ವ ಹೃದಯ ದಿನದ ಸಂದರ್ಭದಲ್ಲಿ ಇಂದು ಅಮ್ಮನ ಜನ್ಮದಿನಾಚರಣೆ ಮಾಡುತ್ತಿರುವುದು ಅರ್ಥ ಪೂರ್ಣ. ಪ್ರೇಮ ಮತ್ತು ಕರುಣೆ ತುಂಬಿದ ಹೃದಯ ಅಮ್ಮನ ವಿಶೇಷತೆಯಾಗಿದ್ದು ವಿಶ್ವದ ಅಸಂಖ್ಯಾತ ಜನರ ಹೃದಯ ಜ್ಯೋತಿಯನ್ನು ಬೆಳಗಿ ಅವರ ಬಾಳಿಗೆ ಬೆಳಕು ನೀಡಿದ್ದಾರೆ .
    ಅಮ್ಮನವರ ಮಾನವೀಯ ಸೇವೆಗಳನ್ನು ಹಾಗೂ ಕರಾವಳಿ ಕರ್ನಾಟಕದಲ್ಲಿನ ಸೇವಾಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
    ಗೌರವಾನ್ವಿತ ಅತಿಥಿಯಾಗಿ ಆಗಮಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಮಾತನಾಡಿ144 ಕೋಟಿ ಜನಸಂಖ್ಯೆಯ ಭಾರತವು ಅಧಿಕ ಮಾನವ ಸಂಪನ್ಮೂಲವನ್ನು ಹೊಂದಿರುವ ರಾಷ್ಟ್ರವಾಗಿದೆ. ಆದರೆ ಇಂದು ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದ್ದರೂ ಭ್ರಷ್ಟತೆ ಸರ್ವವ್ಯಾಪಿಯಾಗಿದೆ. ಹಾಗಾಗಿ ಇಂದು ಸಾಧುಸಂತರ ಮಾರ್ಗದರ್ಶನ ಅತ್ಯಂತ ಅವಶ್ಯವಾಗಿದೆ.
    ಅಮ್ಮನವರು ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಜೊತೆಗೆ ಮನುಷ್ಯರ ಮದ್ಯೆ ಇರುವ ಕಂದಕಗಳನ್ನು ದೂರಮಾಡುವ ಕಾರ್ಯ ಶ್ಲಾಘನೀಯ ಎಂದರು.
    ಈ ಸಂದರ್ಭದಲ್ಲಿ ಅಮ್ಮನವರ ಜೀವನವನ್ನು ಆಧರಿಸಿದ ಕಥಾಮೃತ ಕಾರ್ಯಕ್ರಮವನ್ನು ಗಣೇಶ್ ಎರ್ಮಾಳ್ ಪ್ರಸ್ತುತ ಪಡಿಸಿದರು. ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿ ವೃತ್ತಿಪರತೆ ಮೆರೆದ ಮಂಗಳೂರಿನವರಾದ ದಿಶಾ ಅಮೃತ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
    ಅಮೃತ ಆರೋಗ್ಯ ಸೇವಾ ಯೋಜನೆ ಹಾಗೂ ವಸ್ತ್ರದಾನದ ವಿತರಣೆ ನಡೆಯಿತು.

    ಮೂರೂ ಜಿಲ್ಲೆಗಳ ವಿವಿಧ ಸೇವಾ ಸಮಿತಿಗಳಿಗೆ 2024-26 ಅವಧಿಗೆ ನೂತನ ಪದಾಧಿಕಾರಿಗಳ ಪದಗ್ರಹಣ ಜರುಗಿತು.ಡಾ.ಜೀವರಾಜ್ ಸೊರಕೆಯವರು ಅಮ್ಮನೊಂದಿಗಿನ ಅನುಭವಾಮೃತಗಳನ್ನು ತಿಳಿಸಿದರು.
    ಮಂಗಳೂರಿನ ಸೇವಾ ಸಮಿತಿಯ ಅಧ್ಯಕ್ಷರಾದ ಡಾ.ವಸಂತಕುಮಾರ ಪೆರ್ಲ ಅವರು ಸ್ವಾಗತಿಸಿದರು. ಉಡುಪಿ ಸೇವಾ ಸಮಿತಿಯ ಅಧ್ಯಕ್ಷರಾದ ಯೋಗೀಶ್ ಕೊಡವೂರು ವಂದಿಸಿದರು. ಡಾ.ದೇವದಾಸ್ ಪುತ್ರನ್ ನಿರೂಪಣೆ ಮಾಡಿದರು. ದಕ್ಷಿಣ ಕನ್ನಡ, ಉಡುಪಿ , ಉತ್ತರ ಕನ್ನಡ ಜಿಲ್ಲೆ ಹಾಗೂ ಮುಂಬಯಿನ ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಎಲ್ಲರಿಗೂ ಅಮೃತ ಭೋಜನ,ಪ್ರಸಾದ ವಿತರಣೆ ಮಾಡಲಾಯಿತು.

    Share Information
    Advertisement
    Click to comment

    You must be logged in to post a comment Login

    Leave a Reply