LATEST NEWS
ಪತ್ನಿಯ ಮಾರ್ಫ್ ಫೋಟೋ ಬಳಸಿ ಆ್ಯಪ್ ಏಜೆಂಟರ ಕಿರುಕುಳ – 2,000 ರೂ. ಸಾಲ ಪಡೆದ ವ್ಯಕ್ತಿ ಆತ್ಮಹತ್ಯೆ
ಅಮರಾವತಿ: ತ್ವರಿತ ಸಾಲ ನೀಡುವ ಆ್ಯಪ್ ಮೂಲಕ 2,000 ರೂ. ಸಾಲ ಪಡೆದಿದ್ದ ವ್ಯಕ್ತಿಯೊಬ್ಬ ಆ್ಯಪ್ ಏಜೆಂಟರ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಹೈದರಾಬಾದ್ ಮೂಲದ ನರೇಂದ್ರ (25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆ್ಯಪ್ ಏಜೆಂಟರು ತನ್ನ ಪತ್ನಿಯ ಮಾರ್ಫ್ ಮಾಡಿದ ಅಶ್ಲೀಲ ಫೋಟೋವನ್ನು ನರೇಂದ್ರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಕಳುಹಿಸಿದ್ದಾರೆ. ಇದರಿಂದ ಮನನೊಂದ ನರೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾನೆ.
25 ವರ್ಷದ ನರೇಂದ್ರ ಕಳೆದ 6 ತಿಂಗಳ ಹಿಂದೆಯಷ್ಟೇ ಅಖಿಲಾ ಎಂಬಾಕೆಯೊಂದಿಗೆ ಪ್ರೇಮ ವಿವಾಹವಾಗಿದ್ದ. ದಂಪತಿ ಇಬ್ಬರೂ ವಿಶಾಖಪಟ್ಟಂನಲ್ಲಿ ನೆಲೆಸಿದ್ದರು. ನರೇಂದ್ರ ಮೀನುಗಾರಿಕೆ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಹಮಾವಾನ ವೈಪರಿತ್ಯದಿಂದಾಗಿ ಆರ್ಥಿಕ ನಷ್ಟ ಉಂಟಾಗಿತ್ತು. ಈ ವೇಳೆ ತನ್ನ ಖರ್ಚು ನಿಭಾಯಿಸಲು ತ್ವರಿತ ಸಾಲ ನೀಡುವ ಆ್ಯಪ್‌ನಿಂದ 2,000 ರೂ. ಸಾಲ ಪಡೆದುಕೊಂಡಿದ್ದ.
ಸಾಲ ಪಡೆದ ಕೆಲದಿನಗಳ ನಂತರ ಆ್ಯಪ್ ಏಜೆಂಟರು ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಅಸಭ್ಯ ಭಾಷೆಗಳಿಂದ ಸಂದೇಶ ಕಳುಹಿಸಿದ್ದಾರೆ. ಇಷ್ಟಕ್ಕೆ ಬಿಡದೇ ನರೇಂದ್ರ ಪತ್ನಿಯ ಮಾರ್ಫ್ ಮಾಡಿದ ಅಶ್ಲೀಲ ಫೋಟೋವನ್ನ ಕುಟುಂಬಸ್ಥರು, ಸ್ನೇಹಿತರಿಗೆ ಕಳುಹಿಸಿದ್ದಾರೆ. ಕೊನೆಗೆ ಆತನ ಪತ್ನಿಗೂ ಫೋಟೋ ಕಳುಹಿಸಿದ ಬಳಿಕ ಈ ವಿಷಯ ನರೇಂದ್ರನಿಗೆ ಗೊತ್ತಾಗಿದೆ.
ಬಳಿಕ 2 ಸಾವಿರ ರೂ. ಸಾಲ ತೀರಿಸಲು ಬೇರೊಬ್ಬರ ಬಳಿ ಸಹಾಯ ಕೇಳಿದ್ದರು. ಆದ್ರೆ ಹಣ ಸಿಗದೇ ಸಾಲ ಮರುಪಾವತಿ ಮಾಡಲಾಗಲಿಲ್ಲ. ಇದರಿಂದ ಆ್ಯಪ್ ಏಜೆಂಟರು ನಿರಂತರವಾಗಿ ಕಿರುಕುಳ ನೀಡಲು ಶುರು ಮಾಡಿದರು. ಕೊನೆಗೆ ಮನನೊಂದ ನರೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾನೆ.