KARNATAKA
ಧರ್ಮಸ್ಥಳ ಸಂಘದ ಕಿರುಕುಳ,ಸಾಲ ಕಟ್ಟಲಾಗದೆ ಗೃಹಿಣಿ ನೇಣಿಗೆ ಶರಣು..!

ಮಳವಳ್ಳಿ (ಮಂಡ್ಯ): ಸಾಲ ಕಟ್ಟಲಾಗದೆ ಗೃಹಿಣಿ ಧರ್ಮಸ್ಥಳ ಸಂಘದ ಕಿರುಕುಳ ತಾಳಲಾರದೆ ನೇಣಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಮಲಿಯೂರಿನ ಗೃಹಿಣಿ ಮಹಾಲಕ್ಷ್ಮಿ (35) ನೇಣಿಗೆ ಶರಣಾದ ಮಹಿಳೆಯಾಗಿದ್ದಾಳೆ. ‘ಸಾಲದ ಕಂತಿನ ಹಣ ತುಂಬುವಂತೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ನೀಡಿದ ಕಿರುಕುಳವೇ ಕಾರಣ’ ಎಂದು ಅವರ ಪತಿ ಮಲ್ಲು ಕಿರುಗಾವಲು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘ಪತ್ನಿಯು ಐದು ತಿಂಗಳ ಹಿಂದೆ ಧರ್ಮಸ್ಥಳ ಸಂಘದಲ್ಲಿ ₹2 ಲಕ್ಷ ಸಾಲ ಪಡೆದಿದ್ದರು. ಪ್ರತಿ ಬುಧವಾರ ₹1,700 ಕಂತು ತುಂಬಬೇಕಿತ್ತು. ಸಂಸ್ಥೆಯ ಪ್ರತಿನಿಧಿಯೊಬ್ಬರು ಮನೆಯ ಬಳಿ ಬಂದು ಕೂಡಲೇ ಕಂತಿನ ಹಣ ನೀಡುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅದರಿಂದ ಮನನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡರು’ ಎಂದು ಆರೋಪಿಸಿದ್ದಾರೆ. ತಾಲ್ಲೂಕಿನ ಹಾಡ್ಲಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ‘ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧಿಕ ಬಡ್ಡಿ ಪಡೆಯುತ್ತಿದೆ. ಜನ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು’ ಎಂದು ಕರೆ ನೀಡಿದ್ದರು. ಆರೋಪದ ಬೆನ್ನಲ್ಲೇ ಆತ್ಮಹತ್ಯೆ ಘಟನೆ ನಡೆದಿದ್ದು, ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
