LATEST NEWS
ಇಸ್ರೇಲ್ ಸೈನಿಕರ ಶವವನ್ನು ಬ್ಯಾಗ್ ನಲ್ಲಿ ವಾಪಸ್ ಕಳುಹಿಸುತ್ತೇವೆ ಎಂದ ಹಮಾಸ್
ಇಸ್ರೇಲ್ ನವೆಂಬರ್ 03: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ದ 28ನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಇಸ್ರೇಲ್ ಸೇನೆ ಹಮಾಸ್-ನಿಯಂತ್ರಿತ ಗಾಜಾ ನಗರವನ್ನು ಇಸ್ರೇಲ್ ಸೇನೆ ಸಂಪೂರ್ಣವಾಗಿ ಸುತ್ತುವರೆದಿರುವುದಾಗಿ ಹೇಳಿಕೊಂಡಿದ್ದು, ಹಮಾಸ್ ಉಗ್ರರ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿರುವುದಾಗಿ ಹೇಳಿದೆ.
ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿರುವ ಇಸ್ರೇಲ್ ಸೇನೆ ವಿಶ್ವದ ಯಾವುದೇ ನಾಯಕರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಈಗಾಗಲೇ ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡಲು ಗಡಿಯಲ್ಲಿ ನೂರಾರು ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದ್ದು, ಯಾವಾಗ ಬೇಕಾದರೂ ದಾಳಿ ನಡೆಸಬಹುದು ಎನ್ನಲಾಗಿದೆ. ಇನ್ನು ಇದರ ಬೆನ್ನಲ್ಲೇ, ಗಾಜಾ ನಗರದಲ್ಲಿ ಮೊಬೈಲ್ ನೆಟ್‌ವರ್ಕ್, ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ಈಗ ಗಾಜಾ ನಾಗರಿಕರು ಹಾಗೂ ಉಗ್ರರನ್ನು ಆತಂಕಕ್ಕೀಡು ಮಾಡಿದೆ ಎಂದು ತಿಳಿದುಬಂದಿದೆ.
ಇತ್ತ ಇಸ್ರೇಲ್ ನಡೆಸುತ್ತಿರುವ ಸತತ ದಾಳಿಯಿಂದಾಗಿ ಗಾಜಾ ನಗರದಲ್ಲಿ ಇದುವರೆಗೆ 8,796 ಜನ ಹತರಾಗಿದ್ದಾರೆ ಎಂದು ತಿಳಿದುಬಂದಿದೆ. ಇಸ್ರೇಲ್ ದಾಳಿಗೆ ಇದುವರೆಗೆ 3,648 ಮಕ್ಕಳು, 2,290 ಮಹಿಳೆಯರು ಸೇರಿ ಒಟ್ಟು 8,796 ಮಂದಿ ಬಲಿಯಾಗಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. 22 ಸಾವಿರಕ್ಕೂ ಅಧಿಕ ಜನ ಗಾಯಗೊಂಡಿದ್ದು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇನ್ನೂ 2 ಸಾವಿರಕ್ಕೂ ಅಧಿಕ ನಾಗರಿಕರು ಸಿಲುಕಿದ್ದಾರೆ. ವೆಸ್ಟ್ ಬ್ಯಾಂಕ್ ಪೂರ್ತಿ ಇಸ್ರೇಲ್ ವಶವಾಗಿದ್ದು, ಅಲ್ಲೂ ನೂರಾರು ಜನ ಹತರಾಗಿದ್ದಾರೆ ಎಂದು ಮಾಹಿತಿ ನೀಡಿದೆ.
ಇತ್ತ ಇಸ್ರೇಲಿ ಸೇನೆ ಗಾಜಾನಗರವನ್ನು ಸಂಪೂರ್ಣವಾಗಿ ಸುತ್ತುವರೆದಿರುವ ಕುರಿತು ಪ್ರತಿಕ್ರಿಯಿಸಿರುವ ಹಮಾಸ್ ಸಂಘಟನೆ, ಭಯ ಬೇಡ.. ಗಾಜಾ ಪ್ರವೇಶಿಸಿರುವ ಇಸ್ರೇಲಿ ಸೈನಿಕರನ್ನು ನಾವು ಶವ ಸಾಗಾಣಿಕಾ ಬ್ಯಾಗ್ ಗಳಲ್ಲಿ ತುಂಬಿ ಇಸ್ರೇಲ್ ಗೆ ವಾಪಸ್ ಕಳುಹಿಸುತ್ತೇವೆ ಎಂದು ಹೇಳಿದೆ. ಅಲ್ಲದೆ ಇಸ್ರೇಲ್ ಮಾಡುತ್ತಿರುವ ಸತತ ದಾಳಿಗಳಿಂದ ಕಂಗೆಟ್ಟುಹೋಗಿರುವ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಹಲವು ಆರೋಪ ಮಾಡಿದ್ದು, ಇಸ್ರೇಲ್ ದಾಳಿ ಮುಂದುವರಿಸಿದ್ದು, ಬುಧವಾರ 12ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಇಸ್ರೇಲ್‌ಗೆ ತನ್ನ ದೇಶದ ಒತ್ತೆಯಾಳುಗಳ ರಕ್ಷಣೆಗಿಂತ, ಪ್ಯಾಲೆಸ್ತೀನ್ ನಾಗರಿಕರನ್ನು ಹತ್ಯೆ ಮಾಡುವುದು ಪ್ರಮುಖ ಉದ್ದೇಶವಾಗಿದೆ ಎಂದು ಆರೋಪಿಸಿದೆ. ಆದಾಗ್ಯೂ, ವಿಶ್ವಸಂಸ್ಥೆ ನಿರ್ಣಯವನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದ ಇಸ್ರೇಲ್ ಸೇನೆಯು ದಾಳಿ ಮುಂದುವರಿಸಿದೆ. ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದೆ.