DAKSHINA KANNADA
ರಾಜ್ಯ ಕಾಂಗ್ರೇಸ್ ಸ್ಥಿತಿ ಮನೆಯೊಂದು ನೂರು ಬಾಗಿಲು – ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ
ಪುತ್ತೂರು ನವೆಂಬರ್ 03: ರಾಜ್ಯ ಕಾಂಗ್ರೇಸ್ ಸರಕಾರದ ಸ್ಥಿತಿ ಮನೆಯೊಂದು ನೂರು ಬಾಗಿಲು ಎಂಬಂತಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ಕರ್ನಾಟಕ ರಾಜಕಾರಣದ ಇತಿಹಾಸದಲ್ಲೇ ಇಂತಹ ಕಚ್ಚಾಟ ಎಂದೂ ನೋಡಿಯೇ ಇಲ್ಲ, ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಕಾಂಗ್ರೆಸ್ ನ ಹಲವು ಗುಂಪುಗಳು ಅಸ್ತಿತ್ವಕ್ಕೆ ಬಂದಿವೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ವಿರುದ್ಧ ಅಸಮಾಧಾನದ ಗುಂಪುಗಳಾಗುತ್ತಿವೆ.ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ರಾಜಣ್ಣ, ಬಸವರಾಜ್ ಹೀಗೆ ಶಾಸಕರಿಗೊಬ್ಬರಂತೆ ಒಂದು ಗುಂಪು ಹುಟ್ಡಿಕೊಂಡಿದ್ದು ಈ ಬೆಳವಣಿಗೆಯನ್ನು ಕಂಡ ರಾಜ್ಯದ ಜನತೆಗೆ ಈ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಗೊತ್ತಾಗಿದೆ.ಇದು ರಾಜ್ಯ ರಾಜಕಾರಣದ ಶೋಚನೀಯ ಸ್ಥಿತಿಯಾಗಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ :
ಮುಂಬರುವ ಲೋಕಾಸಭಾ ಚುನಾವಣೆ ಬಗ್ಗೆ ಮಾತನಾಡಿದ ಡಿವಿಎಸ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಲ್ಲಿ ಕೆಲವು ಗೊಂದಲಗಳಿದ್ದುವು ನಿಜ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಯಾರು ನಿಂತರೂ ಬಿಜೆಪಿಗೆ ಸೋಲಾಗಲ್ಲ ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ಇಡೀ ರಾಜ್ಯಕ್ಕೆ ಇದು ಅನ್ವಯವಾಗಲಿದೆ. ಕಾಂಗ್ರೇಸ್ ನಲ್ಲಿ ಉತ್ತಮ ನಾಯಕರು ಇದ್ದ ಕಾರಣ ಅವರಿಗೆ ಅಧಿಕಾರ ದೊರೆತಿತ್ತು, ಆದರೆ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೇಸ್ ಗೆ ನಾಯಕರೇ ಇಲ್ಲ ಎನ್ನುವ ಸ್ಥಿತಿಯಿದೆ. ರಾಹುಲ್ ಗಾಂಧಿಯೊಬ್ಬ ಮಕ್ಕಳಾಟಿಕೆಯ ನೇತಾರ,ಮಕ್ಕಳಾಟಿಕೆಯಿಂದ ಇಂದೂ ಅವರು ಹೊರ ಬಂದಿಲ್ಲ ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ. ಇದೇ ಕಾರಣಕ್ಕಾಗಿ ಕಾಂಗ್ರೇಸ್ ತುಷ್ಟೀಕರಣದ ರಾಜಕಾರಣದಲ್ಲಿ ತೊಡಗಿದೆ.ಅಲ್ಪಸಂಖ್ಯಾತರೇ ಅವರಿಗೆ ಗತಿ ಎನ್ನುವ ಹಂತಕ್ಕೆ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು